ಕಡಲೂರು(ತಮಿಳುನಾಡು): ಭಾರತದ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಕವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಶ್ರೀಮಂತ ರಾಷ್ಟ್ರಗಳಿಗೆ ಟಾಂಗ್ ನೀಡ್ತಿದೆ. ಈ ಮಧ್ಯೆ ಜಾತಿ ಪದ್ಧತಿ ಎಂಬ ಪಿಡುಗು ಮಾತ್ರ ದೇಶದ ಕೆಲವೊಂದು ಹಳ್ಳಿಗಳಲ್ಲಿ ಈಗಲೂ ಜೀವಂತವಾಗಿದೆ.
ಸದ್ಯ ತಮಿಳುನಾಡಿನ ಗ್ರಾಮವೊಂದರಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ. ಕಡಲೂರಿನ ಥರ್ಕು ತಿಟ್ಟೈ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕೆಳಜಾತಿಗೆ ಸೇರಿರುವ ಕಾರಣಕ್ಕಾಗಿ ಆಕೆಯನ್ನ ನೆಲದ ಮೇಲೆ ಕುಳಿತುಕೊಳ್ಳುವಂತೆ ಮಾಡಿದೆ. ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಇತರರೆಲ್ಲರೂ ಕುರ್ಚಿ ಮೇಲೆ ಕುಳಿತುಕೊಂಡಿದ್ದು, ಅಧ್ಯಕ್ಷೆ ಮಾತ್ರ ನೆಲದ ಮೇಲೆ ಕುಳಿತಿರುವ ಫೋಟೋ ವೈರಲ್ ಆಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸದಂತೆ ಈಗಾಗಲೇ ಪಂಚಾಯ್ತಿ ಸೆಕ್ರೆಟರಿಯನ್ನ ಅಮಾನತುಗೊಳಿಸಲಾಗಿದ್ದು, ವಿಚಾರಣೆ ನಡೆಸುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಗ್ರಾಮದಲ್ಲಿ ಪಂಚಾಯ್ತಿ ಅಧ್ಯಕ್ಷ ಸ್ಥಾನ ಕೆಳಜಾತಿ ವರ್ಗಕ್ಕೆ ಮೀಸಲಿದ್ದ ಕಾರಣ ಕಳೆದ ವರ್ಗದ ಮಹಿಳೆ ಆಯ್ಕೆಯಾಗಿದ್ದಾಳೆ. ಇನ್ನು ಉಪಾಧ್ಯಕ್ಷ ಸ್ಥಾನ ಮೇಲ್ಜಾತಿಗೆ ಸೇರಿದೆ. ಹೀಗಾಗಿ ಅನೇಕ ಸಮಾರಂಭಗಳಲ್ಲಿ ಮಹಿಳಾ ಅಧ್ಯಕ್ಷೆ ರಾಜೇಶ್ವರಿಗೆ ಅವಕಾಶ ನೀಡದೇ ಎಲ್ಲ ಕಾರ್ಯಗಳನ್ನ ಉಪಾಧ್ಯಕ್ಷರೇ ಮಾಡುತ್ತಿದ್ದಾರಂತೆ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ದ್ವಜಾರೋಹಣ ಮಾಡಲು ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಸಹ ಕೇಳಿ ಬಂದಿದೆ.
ಕಳೆದ ಜುಲೈ 17ರಂದು ನಡೆದ ಕಾರ್ಯಕ್ರಮದ ವೇಳೆ ಅಧ್ಯಕ್ಷರು ನೆಲದ ಮೇಲೆ ಕುಳಿತುಕೊಂಡಿದ್ದು, ಉಳಿದ ಎಲ್ಲ ಸದಸ್ಯರು ಕುರ್ಚಿ ಮೇಲೆ ಕುಳಿತುಕೊಂಡಿರುವ ವಿಡಿಯೋ ವೈರಲ್ ಆಗಿತ್ತು. ಇದೇ ವಿಚಾರವಾಗಿ ಭುವನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ನಡೆಯುತ್ತಿದ್ದಂತೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಚಂದ್ರಶೇಖರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಎಂ ಶ್ರೀ ಅಭಿನವ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ ಉಪಾಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದಿದ್ದಾರೆ.