ಮುಂಬೈ: ಇಂದು ಮಧ್ಯಾಹ್ನ ಉತ್ತರ ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ತೀರಗಳನ್ನು ಅಪ್ಪಳಿಸಲಿರುವ ನಿಸರ್ಗ್ ಚಂಡಮಾರುತದಿಂದಾಗಿ ಭಾರೀ ಮಳೆ ಮತ್ತು ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆಯು ಮುಂಬೈ ನಿವಾಸಿಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿಂದಾಗಿ ಜನತೆ ಯಾವ ರೀತಿ ಮುಂಜಾಗ್ರತಾ ಕ್ರಮ ವಹಿಸಬೇಕು. ಈ ಸಮಯದಲ್ಲಿ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂದು ಪಾಲಿಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಏನು ಮಾಡಬೇಕು?
- ಅನಗತ್ಯ ವಿದ್ಯುತ್ ಉಪಕರಣಗಳ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಬೇಕು
- ಕುಡಿಯುವ ನೀರನ್ನು ಸ್ವಚ್ಛ ಸ್ಥಳಗಳಲ್ಲಿ ಶೇಖರಿಸಿ
- ಗಾಯಗೊಂಡ ಅಥವಾ ಸಂಕಷ್ಟದಲ್ಲಿರುವವರಿಗೆ ಸಹಾಯಮಾಡಿ. ಅವರಿಗೆ ಬೇಕಾದ ಪ್ರಥಮ ಚಿಕಿತ್ಸೆ ನೀಡಿ
- ಅನಿಲ ಸೋರಿಕೆ ಬಗ್ಗೆ ಎಚ್ಚರ ವಹಿಸಿ. ಏನಾದರೂ ಅಪಾಯದ ಮುನ್ಸೂಚನೆ ಇದ್ದರೆ ತಕ್ಷಣವೇ ಅನಿಲ ಕಂಪನಿಗೆ ಮಾಹಿತಿ ನೀಡಿ
- ಇಲೆಕ್ಟ್ರಿಕ್ ವಸ್ತುಗಳಿಗೆ ಏನಾದರೂ ಹಾನಿಯಾದರೆ, ವಿದ್ಯುತ್ ಪೂರೈಕೆಯ ಮೈನ್ ಸ್ವಿಚ್ ಆಫ್ ಮಾಡಿ. ಅಥವಾ ವಿದ್ಯುತ್ ಕೆಲಸಗಾರನಿಗೆ ತಿಳಿಸಿ
- ಮಕ್ಕಳು, ವಯಸ್ಕರು, ವಿಕಲಾಂಗರು ಹಾಗೂ ಸಹಾಯದ ಅಗತ್ಯವಿರುವ ಸ್ಥಳೀಯರಿಗೆ ಸಹಾಯ ಮಾಡಿ
- ಪ್ರಮುಖ ದಾಖಲೆ ಹಾಗೂ ಅಮೂಲ್ಯ ವಸ್ತುಗಳನ್ನು ಪ್ಲಾಸ್ಟಿಕ್ ಬ್ಯಾಗ್ಗಳಲ್ಲಿಡಿ
- ಸರ್ಕಾರದಿಂದ ನೀಡುವ ಅಧಿಕೃತ ಮಾಹಿತಿ, ಸಲಹೆ-ಸೂಚನೆಗಳನ್ನು ನಿರಂತರವಾಗಿ ಕೇಳಿ. ಅದರಂತೆ ನಡೆದುಕೊಳ್ಳಿ
- ತುರ್ತು ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಕ್ಕೆ ಸಿದ್ಧರಾಗಿ
- ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆರೆಯಬೇಡಿ. ಅಗತ್ಯವಿದ್ದಷ್ಟು ಕಿಟಕಿ ಮಾತ್ರವೇ ತೆರೆದಿಡಿ
- ಮನೆಯ ಮಧ್ಯಭಾಗದಲ್ಲಿರಿ. ಮನೆಯ ಮೂಲೆ ಹಾಗೂ ಹೊರಗಡೆ ಇರುವುದನ್ನು ಕಡಿಮೆ ಮಾಡಿ
- ಗಟ್ಟಿಯಾದ ಮರದ ಟೇಬಲ್, ಸ್ಟೂಲ್ ಕೆಳಗೆ ರಕ್ಷಣೆ ಪಡೆಯಿರಿ
- ನಿಮ್ಮ ಕುತ್ತಿಗೆ ಮತ್ತು ತಲೆಯನ್ನು ರಕ್ಷಿಸಲು ನಿಮ್ಮ ಕೈಗಳನ್ನು ಬಳಸಿ
- ವಿಸ್ತೀರ್ಣವಾದ ಹಾಲ್ಗಳು ಹಾಗೂ ಮಾಲ್ಗಳಂತಹ ಸ್ಥಳದಿಂದ ದೂರವಿರಿ
ಏನು ಮಾಡಬಾರದು...
- ಅನಗತ್ಯ ಸುದ್ದಿಗಳು ಹಾಗೂ ಗಾಳಿಸುದ್ದಿಗಳನ್ನು ನಂಬಬೇಡಿ
- ಎಲ್ಲೂ ಹೊರಗೆ ಹೋಗಬೇಡಿ. ಬೈಕ್ ಹಾಗೂ ಇತರೆ ವಾಹನಗಳಲ್ಲಿ ತಿರುಗಾಡಬೇಡಿ
- ಬಿರುಕು ಬಿಟ್ಟ, ಹಾನಿಗೊಳಗಾದ ಕಟ್ಟಡದಲ್ಲಿ ವಾಸಿಸಬೇಡಿ
- ಗಾಯಾಳುಗಳನ್ನು ಒಂದು ಕಡೆಯಿಂದ ಮತ್ತೊಂದೆಡೆ ಕರೆದೊಯ್ಯುವುದು ಬೇಡ
- ಎಣ್ಣೆ ಅಥವಾ ಇತರೆ ಜಾರುವ ಪದಾರ್ಥಗಳು ಚೆಲ್ಲದಂತೆ ನೋಡಿಕೊಳ್ಳಿ. ಚೆಲ್ಲಿದರೆ ತಕ್ಷಣವೇ ಸ್ವಚ್ಛಗೊಳಿಸಿ