ಭುವನೇಶ್ವರ: ಭೀಕರ ಚಂಡಮಾರುತ ಫಣಿ, ಒಡಿಶಾದ 1 ಕೋಟಿ 48 ಲಕ್ಷ ಜನರ ಬದುಕನ್ನು ಬೀದಿಗೆ ತಂದಿದೆ. ರಕ್ಕಸ ಮಾರುತಕ್ಕೆ 37 ಮಂದಿ ಬಲಿಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಸಂಗ್ರಾಮ್ ಮೊಹಪಾತ್ರ ಮಾಹಿತಿ ನೀಡಿದರು.
ರಾಜ್ಯದ 155 ಭಾಗಗಳಲ್ಲಿನ 1 ಕೋಟಿ, 48 ಲಕ್ಷ ಜನರ ಜೀವನದ ಮೇಲೆ 'ಫಣಿ' ವ್ಯಕ್ತಿರಿಕ್ತ ಪರಿಣಾಮ ಬೀರಿದೆ. 5.8 ಲಕ್ಷ ಮನೆಗಳನ್ನು ಹಾಳು ಮಾಡಿದ ಚಂಡಮಾರುತ 37 ಮಂದಿಯನ್ನು ಬಲಿ ಪಡೆದಿದೆ ಎಂದಿದ್ದಾರೆ.
ಕೇಂದ್ರದ ಗೃಹ ಇಲಾಖೆ 1,000 ಕೋಟಿ ರೂಗಳನ್ನು ಒಡಿಶಾಗೆ ಪರಿಹಾರ ಕಾರ್ಯಕ್ಕೆ ನೀಡುವುದಾಗಿ ಘೋಷಿಸಿದೆ. ಜತೆಗೆ ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 341 ಕೋಟಿ ರೂಗಳ ಮಂಜೂರಾತಿ ದೊರೆತಿದೆ.
ಚಂಡಮಾರುತದಿಂದ ತತ್ತರಿಸಿದ ಪ್ರದೇಶಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಅವರು ಹೇಳಿದ್ದಾರೆ.