ಜೈಪುರ(ರಾಜಸ್ಥಾನ): ದೆಹಲಿಯಲ್ಲಿ ನಿಯೋಜಿಸಲಾಗಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸೈನಿಕನೊಬ್ಬ ಭಾನುವಾರ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿರುವ ತಮ್ಮ ಮನೆಗೆ ಮರಳಿದ ನಂತರ ನಿಧನರಾದರು.
ಸೈನಿಕನು ಶನಿವಾರ ರಾತ್ರಿ ದೆಹಲಿಯಿಂದ ಮನೆಗೆ ಮರಳಿದ್ದು, ಮಾರನೇ ದಿನ ಅಂದರೆ ಭಾನುವಾರ ಮುಂಜಾನೆಯೇ ಮೃತಪಟ್ಟಿದ್ದಾರೆ. ಅವರು ಕೊರೊನಾ ಪಾಸಿಟಿವ್ ಆಗಿದ್ದರೇ ಎಂದು ತಿಳಿಯಲು ಸದ್ಯ ನಾವು ಅವರ ಮಾದರಿಯನ್ನು ತೆಗೆದುಕೊಂಡಿದ್ದೇವೆ. ಪರೀಕ್ಷೆ ನಂತರ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ಡಾ. ಸುಂದರ್ಪಾಲ್ ಯಾದವ್ ಹೇಳಿದರು.
"ಆರೋಗ್ಯ ಅಧಿಕಾರಿಗಳ ಪ್ರಕಾರ, ಸಿಆರ್‌ಪಿಎಫ್ ಜವಾನ್ ಅವರನ್ನು ರಾಷ್ಟ್ರ ರಾಜಧಾನಿಯಲ್ಲಿ ಮುಂಚೂಣಿ ಕೊರೊನಾ ವಾರಿಯರ್ ಆಗಿ ನಿಯೋಜಿಸಲಾಗಿತ್ತು. ಈ ವೇಳೆ, ಅವರಿಗೆ ಗಂಟಲು ನೋವು, ಕೆಮ್ಮು ಮತ್ತು ಶೀತ ಕಾಣಿಸಿಕೊಂಡಿದ್ದು, ಅವರು ಅನಾರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಂತೆಯೇ ಅವರನ್ನು 14 ದಿನಗಳ ಕಾಲ ನಿರ್ಬಂಧಿಸಲಾಯಿತು. ಈ ಮಧ್ಯೆ ಮೇ 8 ರಂದು ಅವರ ಕೊರೊನಾ ಪರೀಕ್ಷೆ ನಡೆದಿದ್ದು, ವರದಿ ನೆಗೆಟಿವ್ ಬಂದಿತ್ತು. ಅದರ ನಂತರ ಸೈನಿಕನಿಗೆ ಮನೆಗೆ ಹಿಂತಿರುಗಲು ಅವಕಾಶ ನೀಡಲಾಯಿತು" ಎಂದು ಆರೋಗ್ಯ ಇಲಾಖೆಯ ಮೂಲವೊಂದು ತಿಳಿಸಿದೆ.
ಸಿಆರ್‌ಪಿಎಫ್ ಸೈನಿಕನ ಸಾವು ರಾಜ್ಯಾದ್ಯಂತ ಆಘಾತದ ಅಲೆ ಹುಟ್ಟಿಸಿದೆ. ಮೂಲಗಳು ಹೇಳುವಂತೆ, ಸ್ಯಾಂಪಲ್ ತೆಗೆದುಕೊಳ್ಳಲು ಒಬ್ಬ ವೈದ್ಯ ಬಂದಿದ್ದು ಬಿಟ್ಟರೆ ಮತ್ತೆ ಯಾವ ಸರ್ಕಾರಿ ಅಧಿಕಾರಿಗಳು ಕೂಡ ಆ ಕಡೆ ಸುಳಿದಿಲ್ಲವಂತೆ.