ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ನಡೆಯುತ್ತಿರುವ ಮತ್ತು ಮುಂದಿನ ಎಲ್ಲಾ ಚುನಾವಣೆಗಳಿಗೆ ಸ್ಟಾರ್ ಪ್ರಚಾರಕರಿಗೆ ಸಂಬಂಧಿಸಿದ ಮಾನದಂಡಗಳನ್ನು ಭಾರತದ ಚುನಾವಣಾ ಆಯೋಗ (ಇಸಿಐ) ಪರಿಷ್ಕರಿಸಿದೆ.
"ಮಾನ್ಯತೆ ಪಡೆದ ರಾಷ್ಟ್ರೀಯ / ರಾಜ್ಯ ರಾಜಕೀಯ ಪಕ್ಷಗಳಿಗೆ ಸ್ಟಾರ್ ಪ್ರಚಾರಕರ ಸಂಖ್ಯೆಯ ಗರಿಷ್ಠ ಮಿತಿ 40ರ ಬದಲು 30 ಆಗಿರಬೇಕು ಮತ್ತು ಗುರುತಿಸಲಾಗದ ನೋಂದಾಯಿತ ರಾಜಕೀಯ ಪಕ್ಷಗಳಿಗೆ 20ರ ಬದಲು 15 ಆಗಿರಬೇಕು" ಎಂದು ದೇಶದ ಎಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
"ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಈಗಾಗಲೇ ಸಲ್ಲಿಸಿರುವ ರಾಜಕೀಯ ಪಕ್ಷಗಳು ನಿಗದಿತ ಅವಧಿಯೊಳಗೆ ಪರಿಷ್ಕೃತ ಪಟ್ಟಿಯನ್ನು ಮತ್ತೆ ಸಲ್ಲಿಸಬೇಕು" ಎಂದು ಇಸಿಐ ತಿಳಿಸಿದೆ.
ಆಯೋಗವು ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಸಲ್ಲಿಸುವ ಅವಧಿಯನ್ನು ಪರಿಷ್ಕರಿಸಿದ್ದು, ಅಧಿಸೂಚನೆಯ ದಿನಾಂಕದಿಂದ 7 ದಿನಗಳ ಬದಲು 10 ದಿನಗಳ ಒಳಗೆ ಸಲ್ಲಿಸಬೇಕು.
ಹೀಗಾಗಿ ಚುನಾವಣಾ ಅಧಿಸೂಚನೆಯ ದಿನಾಂಕದಿಂದ 10 ದಿನಗಳ ಒಳಗೆ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ ಮತ್ತು ಚುನಾವಣಾ ಆಯೋಗಕ್ಕೆ ಕಳುಹಿಸಬೇಕು.
"ಈ ವಿಷಯವನ್ನು ಆಯೋಗದಲ್ಲಿ ಚರ್ಚಿಸಲಾಯಿತು. ಸಾಂಕ್ರಾಮಿಕ ರೋಗದ ಸನ್ನಿವೇಶಗಳನ್ನು ಪರಿಗಣಿಸಿದ ನಂತರ ಮತ್ತು ರಾಜಕೀಯ ಪಕ್ಷಗಳ ಅಭಿಯಾನದ ಅವಶ್ಯಕತೆಯನ್ನು ಗಮನದಲ್ಲಿರಿಸಿ ಆಯೋಗವು ಸ್ಟಾರ್ ಪ್ರಚಾರಕರ ಮಾನದಂಡಗಳನ್ನು ಪರಿಷ್ಕರಿಸಲು ನಿರ್ಧರಿಸಿದೆ" ಎಂದು ಇಸಿಐ ಹೇಳಿದೆ.