ದೆಹಲಿ: ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ, ದೆಹಲಿ ಹಾಗೂ ಕೇರಳ ರಾಜ್ಯಗಳಲ್ಲಿ ಕೋವಿಡ್ನಿಂದ ಶೇಕಡ 58 ರಷ್ಟು ಸಾವುಗಳು ಸಂಭವಿಸಿವೆ. ಹಬ್ಬದ ಅವಧಿಯಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗಿದ್ದು, ಈ ಐದು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
13 ದಿನಗಳಲ್ಲಿ 10 ಲಕ್ಷ ಜನ ಗುಣಮುಖ:
ಕೋವಿಡ್ ನಿಂದ 1 ಲಕ್ಷದಿಂದ 10 ಲಕ್ಷ ಜನರು ಗುಣಮುಖರಾಗಲು 57 ದಿನಗಳು ಬೇಕಾಯಿತು. ಆದರೆ, ಕಳೆದ 13 ದಿನಗಳಲ್ಲಿ 10 ಲಕ್ಷ ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿರುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ.
ಮೂರು ದೇಶಗಳಲ್ಲಿ ಲಸಿಕೆ ಪ್ರಯೋಗ:
ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕಾದಲ್ಲಿ ಕೊರೊನಾ ಲಸಿಕೆ ಪ್ರಯೋಗ ನಡೆಯುತ್ತಿದೆ. ಭಾರತದಲ್ಲಿ ಮೂರನೇ ಹಂತದ ಪ್ರಯೋಗಗಳಿಗೆ ಅನುಮೋದನೆ ದೊರೆತಿದೆ ಎಂದು ಐಸಿಎಂಆರ್ನ ಡಿಜಿ ಬಲರಾಮ್ ಭಾರ್ಗವ ಹೇಳಿದರು.
ಭಾರತದಲ್ಲಿ ಈವರೆಗೆ 17 ವರ್ಷದೊಳಗಿನ ಶೇ 8 ರಷ್ಟು ಮಕ್ಕಳಿಗೆ ಮಾತ್ರ ಕೋವಿಡ್ ದೃಢಪಟ್ಟಿದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಈ ಸೋಂಕು ಕಂಡು ಬಂದಿಲ್ಲ ಎಂದು ಬಲರಾಮ್ ಭಾರ್ಗವ ತಿಳಿಸಿದ್ದಾರೆ.
ಕೋವಿಡ್ ನಮ್ಮೆಲ್ಲರಿಗೂ ಒಂದು ಪಾಠ:
ತಲಾ ಆದಾಯ, ಹೆಚ್ಚಿನ ಆರ್ಥಿಕ ಸದೃಢತೆ, ಉತ್ತಮ ಆರೋಗ್ಯ ವ್ಯವಸ್ಥೆ ಹೊಂದಿರುವ ನಾವು ಕೋವಿಡ್ಗೆ ಅಬ್ಬರಕ್ಕೆ ನಲುಗಿದ್ದೇವೆ. ಇದು ನಮ್ಮೆಲ್ಲರಿಗೂ ಒಂದು ಪಾಠವಾಗಿದೆ. ಈಗಾಗಲೇ ಅನೇಕ ಕಂಪನಿಗಳು ವ್ಯಾಕ್ಸಿನ್ ಕಂಡು ಹಿಡಿಯುವಲ್ಲಿ ನಿರತವಾಗಿವೆ. ಲಸಿಕೆ ತಯಾರಾದ ಕೂಡಲೇ ಎಲ್ಲ ರಾಜ್ಯಗಳಿಗೂ ತಲುಪಿಸಲು ಬೇಕಾದ ವ್ಯವಸ್ಥೆ ಮಾಡಲಾಗುವುದು ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಹೇಳಿದ್ದಾರೆ.