ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ನಿತ್ಯ ಹೆಚ್ಚುತ್ತಿರುವ ಹಿನ್ನೆಲೆ ಭಾರತ ಅಗತ್ಯ ವೈದ್ಯಕೀಯ ಪರಿಕರಗಳನ್ನು ಶಾಂಘೈಯಿಂದ ಆಮದು ಮಾಡಿಕೊಂಡಿದೆ. ಇಲ್ಲಿನ ದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಚೀನಾದ ಶಾಂಘೈನಿಂದ ವೈದ್ಯಕೀಯ ಸಾಮಗ್ರಿ ತುಂಬಿರುವ ಸ್ಪೈಸ್ ಜೆಟ್ ಸರಕು ಸಾಗಣೆ ವಿಮಾನವು ಬಂದಿಳಿದಿದೆ. ಈ ವಿಮಾನವು ಸುಮಾರು 18 ಟನ್ ವೈದ್ಯಕೀಯ ಮತ್ತು ತುರ್ತು ಸರಬರಾಜುಗಳನ್ನು ಹೊತ್ತು ಬಂದಿದೆ.
ಲಾಕ್ಡೌನ್ ಬಳಿಕ ಭಾರತದಲ್ಲಿ 522 ಸರಕು ಸಾಗಣೆ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಈ ಹಿನ್ನೆಲೆ ಸ್ಪೈಸ್ಜೆಟ್ನ ಪ್ರಯಾಣಿಕರ ವಿಮಾನವನ್ನೇ ಸರಕು ಸಾಗಣೆಗಾಗಿ ಬಳಸಲಾಗಿದೆ. ಇದೇ ಮೊದಲ ಬಾರಿಗೆ ಬಿ 737 ಮತ್ತು ಕ್ಯು- 400 ನಾಗರಿಕ ವಿಮಾನದ ಕ್ಯಾಬಿನ್ ಅನ್ನು ಸರಕು ಸಾಗಿಸಲು ಬಳಸಲಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಲೈಫ್ಲೈನ್ ಉಡಾನ್ ಇದುವರೆಗೂ 3,63,819 ಕಿ.ಮೀಟರ್ ಹಾರಾಟ ನಡೆಸಿದ್ದು, ಒಟ್ಟು 368 ವಿಮಾನಗಳಲ್ಲಿ 649 ಟನ್ ಸರಬರಾಜು ಮಾಡಲಾಗಿದೆ. ಇನ್ನೂ ಏರ್ ಇಂಡಿಯಾ ಜೊತೆಗೆ ಖಾಸಗಿ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ, ಬ್ಲುಡಾರ್ಟ್ ಸಂಸ್ಥೆ ಸಹ ವೈದ್ಯಕೀಯ ಸರಕು ಸಾಗಣೆಗಾಗಿ ಹಾರಾಟ ನಡೆಸಿವೆ. ಚೀನಾ ಹಾಗೂ ಭಾರತದ ನಡುವೆ ಸರಕು ಸಾಗಣೆಗಾಗಿ ಏರ್ ಬ್ರಿಡ್ಜ್ ಸ್ಥಾಪಿಸಲಾಗಿದ್ದು, ಈ ಮೂಲಕ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.