ನವದೆಹಲಿ: ದೇಶದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಇದೀಗ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 30 ಲಕ್ಷದ ಗಡಿ ದಾಟಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸದ್ಯ ದೇಶದಲ್ಲಿ 30,05,281 ಪ್ರಕರಣಗಳಿದ್ದು, ಇದರಲ್ಲಿ 6,97,330 ಸಕ್ರಿಯ ಪ್ರಕರಣ ಹಾಗೂ 22,22,577 ಸೋಂಕಿತರು ಡಿಸ್ಚಾರ್ಜ್ ಆಗಿದ್ದು, 55,794 ಜನರು ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಯಲ್ಲಿ ಹೊಸದಾಗಿ 29,580 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಸದ್ಯ ಕೋವಿಡ್ ವಿಚಾರವಾಗಿ ಭಾರತ ಪ್ರಪಂಚದಲ್ಲಿ ಮೂರನೇ ಸ್ಥಾನದಲ್ಲಿದೆ. 56,21,325 ಪ್ರಕರಣ ಹೊಂದಿರುವ ಅಮೆರಿಕ ಮೊದಲ ಸ್ಥಾನ ಹಾಗೂ 35,32,330 ಕೇಸ್ ಹೊಂದಿರುವ ಬ್ರೆಜಿಲ್ 2ನೇ ಸ್ಥಾನದಲ್ಲಿದೆ.
ಕೇವಲ 15 ದಿನಗಳ ಅಂತರದಲ್ಲಿ ಭಾರತದಲ್ಲಿ 10 ಲಕ್ಷ ಕೊರೊನಾ ಕೇಸ್ ಪತ್ತೆಯಾಗಿದ್ದು, ಆಗಸ್ಟ್ 7ರಂದು ಭಾರತದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 20 ಲಕ್ಷ ಆಗಿತ್ತು. ಕಳೆದ 10 ದಿನಗಳಿಂದ ದೇಶದಲ್ಲಿ ಪ್ರತಿದಿನ 50 ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ.
ಮೂರು ರಾಜ್ಯಗಳಲ್ಲಿ 15 ಲಕ್ಷ ಕೋವಿಡ್ ಕೇಸ್
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 6,57,450 ಕೇಸ್, ತಮಿಳುನಾಡು 3,73,410 ಹಾಗೂ ಆಂಧ್ರಪ್ರದೇಶ 3,45,216 ಕೇಸ್ ಕಾಣಿಸಿಕೊಂಡಿವೆ. ಉಳಿದಂತೆ ಕರ್ನಾಟಕದಲ್ಲಿ 2,64,546, ಉತ್ತರಪ್ರದೇಶದಲ್ಲಿ 1,77,239 ಸೋಂಕಿತ ಪ್ರಕರಣಗಳಿವೆ.