ನವದೆಹಲಿ: ಕೊರೊನಾ ವೈರಸ್ ಅಬ್ಬರ ದೇಶದಲ್ಲಿ ಮತ್ತಷ್ಟು ಜಾಸ್ತಿಯಾಗಿದ್ದು, ಕೊರೊನಾ ಬಾಧಿತ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಭಾನುವಾರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.
ಕಳೆದ 24 ಗಂಟೆಗಳಲ್ಲಿ 24,248 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು 6,97,413ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. ಭಾರತವು ಈಗ ರಷ್ಯಾವನ್ನು ಹಿಂದಿಕ್ಕಿ ಅತಿ ಹೆಚ್ಚು ಸೋಂಕಿತರಿರುವ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 425 ಸಾವುಗಳು ಸಂಭವಿಸಿವೆ. ಒಟ್ಟು ಸಾವಿನ ಸಂಖ್ಯೆ ಈಗ 19,693ಕ್ಕೆ ಏರಿಕೆ ಆಗಿದೆ. ಆದರೆ 4,24,433 ಸೋಂಕಿತರು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ.
ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ತೆಲಂಗಾಣ, ಕರ್ನಾಟಕ, ಅಸ್ಸೋಂ ಮತ್ತು ಬಿಹಾರ ರಾಜ್ಯಗಳಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿದೆ.