ನವದೆಹಲಿ: ದೇಶದಲ್ಲಿ ಲಾಕ್ಡೌನ್ ಮುಂದುವರಿಸಲಾಗಿದ್ದರೂ ಕೋವಿಡ್ -19 ಪ್ರಕರಣಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಇಂದು ಕೆಲ ರಾಜ್ಯಗಳಲ್ಲಿ ಮತ್ತಷ್ಟು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ನಿನ್ನೆ ರಾತ್ರಿಯಷ್ಟೇ 65 ಹೊಸ ಪ್ರಕರಣಗಳು ದೃಢಪಟ್ಟಿದ್ದ ಮಧ್ಯಪ್ರದೇಶದ ಇಂದೋರ್ನಲ್ಲಿ ಇದೀಗ 121 ಪ್ರಕರಣಗಳು ವರದಿಯಾಗಿದ್ದು, ನಗರದಲ್ಲಿ ಸೋಂಕಿತರ ಸಂಖ್ಯೆ 548ಕ್ಕೆ ಏರಿಕೆಯಾಗಿದೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಈವರೆಗೆ ಒಟ್ಟು 862 ಮಂದಿಗೆ ಸೋಂಕು ತಗುಲಿದಂತಾಗಿದೆ.
ಮುಂಬೈನ ಧಾರಾವಿ ಪ್ರದೇಶದಲ್ಲಿ ಮತ್ತೆ ಐವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈ ಒಂದು ಪ್ರದೇಶದಲ್ಲೇ ಸೋಂಕಿತರ ಸಂಖ್ಯೆ 60ಕ್ಕೆ ಏರಿದ್ದು, ಇದರಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಎಂದು ಮುಂಬೈ ಮಹಾನಗರ ಪಾಲಿಕೆ ಸ್ಪಷ್ಟಪಡಿಸಿದೆ. ಮಹಾರಾಷ್ಟ್ರದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 2,687ಕ್ಕೆ ಏರಿಕೆಯಾಗಿದ್ದು, ಈವರೆಗೆ 178 ಮಂದಿಯನ್ನು ಮಹಾಮಾರಿ ವೈರಸ್ ಬಲಿ ಪಡೆದಿದೆ. ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1,561 ಕೊರೊನಾ ಪ್ರಕರಣ ಹಾಗೂ 30 ಸಾವುಗಳು ಸಂಭವಿಸಿವೆ.
ಗುಜರಾತ್ನಲ್ಲಿ ಇಂದು 56 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿ ಸೋಂಕಿತರ ಸಂಖ್ಯೆ 699ಕ್ಕೆ ಏರಿಕೆಯಾಗಿದೆ. ಅಹಮದಾಬಾದ್ ಹಾಗೂ ಸೂರತ್ನಲ್ಲಿ ಮತ್ತಿಬ್ಬರು ಮೃತಪಟ್ಟಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು 30 ಮಂದಿ ಬಲಿಯಾಗಿದ್ದಾರೆ. ಅಹಮದಾಬಾದ್ನಲ್ಲಿ ಮಂಗಳವಾರ 53 ಹೊಸ ಪ್ರಕರಣಗಳು ಪತ್ತೆಯಾದ ಬಳಿಕ ನಗರದಲ್ಲಿ ಸೋಂಕಿತರ ಸಂಖ್ಯೆ 373ಕ್ಕೆ ಏರಿಕೆಯಾಗಿದೆ.
ರಾಜಸ್ಥಾನದಲ್ಲಿ ಇಂದು ಬೆಳಗ್ಗೆ 9 ಗಂಟೆ ವೇಳೆಗೆ 29 ಹೊಸ ಪ್ರಕರಣಗಳು ದಾಖಲಾಗಿವೆ. ಜೈಪುರದಿಂದ 15, ಜೋಧ್‌ಪುರ ಹಾಗೂ ಕೋಟಾದಿಂದ ತಲಾ 7 ಮಂದಿಗೆ ಸೋಂಕು ದೃಢಪಟ್ಟಿದೆ. ಈ ರಾಜ್ಯದಲ್ಲಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 1034ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.