ಶ್ರೀನಗರ(ಜಮ್ಮು ಕಾಶ್ಮೀರ): ಕೊರೊನಾ ವೈರಸ್ ಹರುಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಮ್ಮು ಕಾಶ್ಮೀರ ಸರ್ಕಾರ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ. ಇದೀಗ ಕೊರೊನಾ ಸೋಂಕು ತಡೆಗಾಗಿ ಹಾಗೂ ಸೋಂಕಿತರನ್ನು ಅತೀ ವೇಗವಾಗಿ ಪತ್ತೆ ಹಚ್ಚಲು 9,600 ರ್ಯಾಪಿಡ್ ಕಿಟ್ಗಳನ್ನು ತರಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓರ್ವ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗುಲಿದೆಯೇ ಅಥವಾ ರೋಗ ತಗುಲಿರುವ ವ್ಯಕ್ತಿಯ ದೇಹದ ರಕ್ತದ ಹರಿವಿನಲ್ಲಿ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವುದೇ ಎಂಬುದನ್ನು ಪತ್ತೆ ಹಚ್ಚಲು ರ್ಯಾಪಿಡ್ ಕಿಟ್ ಸಹಕಾರಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕಿಟ್ನಿಂದಾಗಿ ಕೊರೊನಾ ಸೋಂಕಿತ ವ್ಯಕ್ತಿಯನ್ನು ಪರೀಕ್ಷೆಗೊಳಪಡಿಸಿದರೆ ಕೇವಲ 30ನಿಮಿಷಗಳೊಳಗಾಗಿ ಆತನಿಗೆ ಕೋವಿಡ್ ಸೋಂಕು ತಗುಲಿದೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ. ಇದರಿಂದಾಗಿ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಅತೀ ಶೀಘ್ರವಾಗಿ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಅನುಕೂಲವಾಗಲಿದೆ.
ಪ್ರಸ್ತುತ 9,600 ಕಿಟ್ಗಳನ್ನು ತರಿಸಿಕೊಳ್ಳುವ ಯೋಜನೆ ರೂಪಿಸಿದ್ದು, ಕಾಶ್ಮೀರ ಕಣಿವೆಯಲ್ಲಿ ಗುರುತಿಸಲಾದ 83 ರೆಡ್ ಝೋನ್(ಕೆಂಪು ವಲಯ)ಗಳಲ್ಲಿ ಇದನ್ನು ಬಳಸಲಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕಿಟ್ಗಳ ಸಹಾಯದಿಂದ ಸ್ಥಳದಲ್ಲೇ ಫಲಿತಾಂಶಗಳನ್ನು ಕಂಡುಕೊಳ್ಳಲು ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಕೆಂಪು ವಲಯಗಳನ್ನು ಹೊರತುಪಪಡಿಸಿ, ಇನ್ನಿತರ ಪ್ರದೇಶಗಳಲ್ಲಿ ಈ ಕಿಟ್ಗಳನ್ನು ಬಳಸಲಾಗುವುದು ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.