ಲಖನೌ: ಕೋವಿಡ್-19ನಿಂದ ಇಡೀ ಜಗತ್ತು ತತ್ತರಿಸಿ ಹೋಗಿದೆ. ಅದೆಷ್ಟೋ ಮಂದಿಯನ್ನು ಕೊರೊನಾ ವೈರಸ್ ಬೀದಿಗೆ ತಳ್ಳಿದೆ. ಭಾರತದಲ್ಲೂ ಕಳೆದ ಎರಡೂವರೆಗೆ ತಿಂಗಳಿನಿಂದ ಈ ಮಹಾಮಾರಿ ಉಂಟುಮಾಡಿರುವ ನಷ್ಟ ಅಷ್ಟಿಷ್ಟಲ್ಲ. ಆರ್ಥಿಕತೆ ಪಾತಾಳಕ್ಕೆ ಕುಸಿದಿರುವ ಬೆನ್ನಲ್ಲೇ ನಿರುದ್ಯೋಗ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಇದಕ್ಕೆ ಉತ್ತಮ ನಿದರ್ಶನ ಕೆಲಸಕ್ಕಾಗಿ ಮನ್ರೇಗಾದಡಿ ಅರ್ಜಿ ಸಲ್ಲಿಸಿರುವ ಪದವೀಧರರ ಸಂಖ್ಯೆ.
ಕೊರೊನಾ ವೈರಸ್ ಅನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದಾಗಿನಿಂದ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ವಾಪಸ್ ಆಗಿದ್ದಾರೆ. ನಾನಾ ಭಾಗಗಳಿಂದ ಉತ್ತರಪ್ರದೇಶಕ್ಕೆ ವಾಪಸ್ ಆಗಿರುವ ಕಾರ್ಮಿಕರು ಇದೀಗ ಅಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕಾಗಿ 30 ಲಕ್ಷ ವಲಸೆ ಕಾರ್ಮಿಕರು ಅರ್ಜಿ ಸಲ್ಲಿಸಿದ್ದಾರೆ. ಕೇವಲ ವಲಸೆ ಕಾರ್ಮಿಕರು ಮಾತ್ರ ಮನ್ರೇಗಾದಡಿ ಅರ್ಜಿ ಸಲ್ಲಿಸಿಲ್ಲ. ಪದವೀಧರರು ಕೂಲಿಗೆ ಮನವಿ ಮಾಡಿಕೊಂಡಿರುವುದು ಆರ್ಥಿಕತೆ ಕುಸಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಲಖನೌ ಸಮೀಪದ ಗ್ರಾಮವೊಂದರ ಬಿಎ ಪದವೀಧರ ರೋಷನ್ ಕುಮಾರ್ ಮನ್ರೇಗಾದಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾನು ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡಿದ್ದೇನೆ. ಉದ್ಯೋಗವಿಲ್ಲದೇ ಜೀವನ ನಡೆಸಲು ಕಷ್ಟಕರವಾಗಿದೆ. ಹೀಗಾಗಿ ಮನ್ರೇಗಾದಡಿ ಕೂಲಿಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ತಮ್ಮ ಸಂಕಷ್ಟವನ್ನು ವಿವರಿಸುತ್ತಾರೆ.
ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ರೋಷನ್ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಗುಳಿ ಅಗೆಯುವುದು ಮತ್ತು ಗ್ರಾಮೀಣ ರಸ್ತೆ ನಿರ್ಮಾಣದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ನಾನು ಬಿಬಿಎ ಪದವಿ ಮುಗಿಸಿದ್ದೇನೆ. ಆದ್ರೆ ಯಾವುದೇ ಕೆಲಸ ಸಿಕ್ಕಿರಲಿಲ್ಲ. ಕೊನೆಗೆ ಆರೇಳು ಸಾವಿರ ರೂಪಾಯಿ ಸಂಬಳ ಬರುವಂತೆ ಕೆಲಸ ಸಿಕ್ಕಿತ್ತು. ಅದೂ ಕೂಡ ಲಾಕ್‌ಡೌನ್‌ನಿಂದ ಕಳೆದುಕೊಳ್ಳಬೇಕಾಯಿತು. ನಮ್ಮ ಹಳ್ಳಿಗೆ ವಾಪಸ್ ಆಗಿ ಗ್ರಾಮ ಪಂಚಾಯಿತಿ ಮುಖ್ಯಸ್ಥರ ನೆರವಿನಿಂದ ಮನ್ರೇಗಾದಲ್ಲಿ ಕೆಲಸ ಸಿಕ್ಕಿದೆ ಎನ್ನುತ್ತಾರೆ ಬಿಬಿಎ ಪದವೀಧರ ಸತ್ಯೇಂದ್ರ ಕುಮಾರ್.
ಕೋವಿಡ್-19 ನಿಂದಾಗಿ ಇಂತಹ ನೂರಾರು ಮಂದಿ ಕೆಲಸವಿಲ್ಲದೆ ಮನ್ರೇಗಾವನ್ನು ಆಶ್ರಯಿಸಿದ್ದಾರೆ. ದೇಶದಲ್ಲಿ ಏಪ್ರಿಲ್ 1 ರಿಂದ ಬರೋಬ್ಬರಿ 35 ಲಕ್ಷ ಮಂದಿ ಪದವೀಧರರು ಮನ್ರೇಗಾದಡಿ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ. ಇದು ಕಳೆದೊಂದು ದಶಕದಲ್ಲಿ ಅತಿ ಹೆಚ್ಚು ಅಂತ ಹೇಳಲಾಗುತ್ತಿದೆ.
ಲಾಕ್‌ಡೌನ್‌ಗೂ ಮುನ್ನ ದಿನವೊಂದಕ್ಕೆ 20 ಮಂದಿ ಮನ್ರೇಗಾ ಕಾರ್ಮಿಕರಿದ್ದರು. ಇದೀಗ ಆ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ಐವರಲ್ಲಿ ಒಬ್ಬರು ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡು ಈ ಯೋಜನೆಯಡಿ ಕೂಲಿ ಮಾಡಲು ಮುಂದಾಗಿರುವ ಪದವೀಧರರಾಗಿದ್ದಾರೆ. 30 ಲಕ್ಷ ವಲಸೆ ಕಾರ್ಮಿಕರಿಗೆ ಮನ್ರೇಗಾದಡಿ ಕೆಲಸ ಕೊಡುವುದಾಗಿ ಸಿಎಂ ಯೋಗಿ ಸರ್ಕಾರ ಘೋಷಣೆ ಮಾಡಿದೆ. ದೇಶದಲ್ಲಿ ಒಟ್ಟು 14 ಕೋಟಿ ಮಂದಿ ಮನ್ರೇಗಾ ಕಾರ್ಡ್ಗಳನ್ನು ಹೊಂದಿದ್ದಾರೆ.