ನವದೆಹಲಿ: ಮಹಾಮಾರಿ ಕೋವಿಡ್-19 ದಿನದಿಂದ ದಿನಕ್ಕೆ ಅತಿ ಹೆಚ್ಚು ಜನರಲ್ಲಿ ಹರಡುತ್ತಿದೆ. ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 31 ಸಾವಿರ ಗಡಿ ದಾಟಿದ್ದು, ಸಾವಿನ ಸಂಖ್ಯೆ 1 ಸಾವಿರಕ್ಕೆ ಬಂದು ನಿಂತಿದೆ.
ಇಲ್ಲಿಯವರೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟು 31,329 ಕೋವಿಡ್-19 ಪ್ರಕರಣ ಕಂಡು ಬಂದಿದ್ದು, 1,007 ಜನರು ಸಾವನ್ನಪ್ಪಿದ್ದಾರೆ. ದಿನದಿಂದ ದಿನಕ್ಕೆ ಅತಿ ಹೆಚ್ಚು ಜನರಲ್ಲಿ ಈ ಸೋಂಕು ಹರಡುತ್ತಿದ್ದು, ಕಳೆದ ಒಂದೇ ವಾರದಲ್ಲಿ 10 ಸಾವಿರ ಜನರಿಗೆ ಈ ಮಹಾಮಾರಿ ತಗುಲಿದೆ. 24 ಗಂಟೆಯಲ್ಲಿ 74 ಜನರು ಸಾವನ್ನಪ್ಪಿದ್ದಾರೆ.
ಗುಜರಾತ್ನಲ್ಲಿ 3,548 ಕೇಸ್ ಹಾಗೂ ಮಹಾರಾಷ್ಟ್ರದಲ್ಲಿ 8,590 ಪ್ರಕರಣ ಕಂಡು ಬಂದಿವೆ. ಉಳಿದಂತೆ ದೆಹಲಿಯಲ್ಲಿ 3,108, ಮಧ್ಯಪ್ರದೇಶ 2,368, ರಾಜಸ್ಥಾನ 2,262, ಉತ್ತರಪ್ರದೇಶ 2,043, ತೆಲಂಗಾಣ 1,004, ಕರ್ನಾಟಕ 520 ಪ್ರಕರಣ ಕಂಡು ಬಂದಿವೆ. ಇಲ್ಲಿಯವರೆಗೆ 7,027 ಜನರು ಈ ಮಹಾಮಾರಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 369 ಜನರು ಸಾವನ್ನಪ್ಪಿದ್ದು, ಗುಜರಾತ್ನಲ್ಲಿ 162 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ.
ಇದರ ಮಧ್ಯೆ ಕಳೆದ ಒಂದು ವಾರದಿಂದ ದೇಶದ 80 ಜಿಲ್ಲೆಗಳಲ್ಲಿ ಯಾವುದೇ ಹೊಸ ಸೋಂಕು ಕಂಡು ಬಂದಿಲ್ಲ ಎಂದು ನಿನ್ನೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.