ಹೈದರಾಬಾದ್: ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಈ ವೇಳೆ ಸಾಕಷ್ಟು ಬಡವರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದ ಬಹುತೇಕ ಮಂದಿ ಸರಿಯಾದ ಸಮಯಕ್ಕೆ ಆಹಾರ ಸಿಗದೇ ಪರದಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲೂ ಕೂಡಾ ಇದೇ ಪರಿಸ್ಥಿತಿಯಿದ್ದು ಕೆಲವೊಂದು ನಗರಗಳಲ್ಲಿ ಕ್ಯಾಂಟೀನ್ಗಳು ಬಡವರ ಹಸಿವು ನೀಗಿಸುತ್ತಿವೆ.
ಬೆಂಗಳೂರಿನಲ್ಲಿ ಹಸಿವು ನೀಗಿಸುತ್ತಿದೆ ಇಂದಿರಾ ಕ್ಯಾಂಟೀನ್:
ಲಾಕ್ ಡೌನ್ ವೇಳೆ ಕರ್ನಾಟಕದ ಇಂದಿರಾ ಕ್ಯಾಂಟೀನ್ ಬಹುಪ್ರಮುಖ ಪಾತ್ರ ವಹಿಸುತ್ತಿದೆ. ಬೆಳಗ್ಗೆ 7ರಿಂದ 10 ಗಂಟೆಯವರೆಗೆ, ಮಧ್ಯಾಹ್ನ 12.30ರಿಂದ 3ರವರೆಗೆ, ರಾತ್ರಿ 7.30ರಿಂದ 9ರವರೆಗೆ ಈ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದೆ. ಮೊದಲಿಗೆ ರಿಯಾಯಿತಿ ದರದಲ್ಲಿ ಊಟ ನೀಡುತ್ತಿದ್ದ ಈ ಕ್ಯಾಂಟೀನ್ ಈಗ ಬೀದಿ ಬದಿ ವ್ಯಾಪಾರಿಗಳಿಗೆ, ಕಾರ್ಮಿಕರಿಗೆ ಹಾಗೂ ಬಡವರಿಗೆ ಉಚಿತ ಊಟ ನೀಡುತ್ತಿದೆ. ಇಲ್ಲಿ ಕಾರ್ಯನಿರ್ವಹಣೆ ಮಾಡುವ ಸಿಬ್ಬಂದಿ ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ.
ಮುತ್ತಿನ ನಗರಿಯಲ್ಲಿ ''ಅನ್ನಪೂರ್ಣೆ''ಯಾಗಿ ಹಸಿವಿಗೆ ಮುಕ್ತಿ
ಹೈದರಾಬಾದ್ನಲ್ಲಿ ಕೊರೊನಾ ಕಾರಣಕ್ಕೆ ಘೋಷಣೆಯಾದ ಲಾಕ್ಡೌನ್ನಿಂದ ಜನ ತತ್ತರಿಸಿದ್ದಾರೆ. ಈ ಹಿಂದೆ ಸರ್ಕಾರವೇ ಸ್ಥಾಪಿಸಿದ್ದ ಅನ್ನಪೂರ್ಣ ಕ್ಯಾಂಟೀನ್ನಲ್ಲಿ ಮಾರ್ಚ್ 29ರಿಂದ ಉಚಿತ ಆಹಾರ ನೀಡಲಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ 5 ರೂಪಾಯಿಗೆ ಊಟ ನೀಡಲಾಗುತ್ತಿತ್ತು. ಹೈದರಾಬಾದ್ನಾದ್ಯಂತ 150 ಅನ್ನಪೂರ್ಣ ಕ್ಯಾಂಟೀನ್ಗಳಿದ್ದು ಪ್ರತಿದಿನ 40 ಸಾವಿರಕ್ಕೂ ಹೆಚ್ಚು ಮಂದಿಗೆ ಊಟ ಒದಗಿಸಲಾಗುತ್ತಿದೆ.
ತಮಿಳುನಾಡಿನ ಚೆನ್ನೈನಲ್ಲಿ ''ಅಮ್ಮ''ನ ಕೈತುತ್ತು..!
ತಮಿಳುನಾಡಿನಲ್ಲಿ ಸ್ವ ಸಹಾಯ ಗುಂಪುಗಳಿಂದ ಅಮ್ಮಕ್ಯಾಂಟೀನ್ ನಡೆಯುತ್ತಿದ್ದು ಲಾಕ್ಡೌನ್ ವೇಳೆ ಪ್ರಮುಖ ಪಾತ್ರ ವಹಿಸುತ್ತಿವೆ. ಇಲ್ಲಿ ಕಡಿಮೆ ಬೆಲೆಗೆ ಅಂದರೆ ಒಂದು ರೂಪಾಯಿಗೆ ಇಡ್ಲಿ ಹಾಗೂ ಮೂರು ರೂಪಾಯಿಗೆ ಮೊಸರನ್ನ, ಐದು ರೂಪಾಯಿಗೆ ಪೊಂಗಲ್, ಚಿತ್ರಾನ್ನ ನೀಡಲಾಗುತ್ತಿದೆ. ಇದರ ಜೊತೆಗೆ ಕೊರೊನಾ ವೈರಸ್ ಕುರಿತಾಗಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈ ಅಮ್ಮ ಕ್ಯಾಂಟೀನ್ಗೆ ಸರ್ಕಾರದ ಅನುದಾನವೂ ಸಿಗುತ್ತಿದೆ. ಚೆನ್ನೈ ಪ್ರವಾ, ವರ್ದಾ ಸೈಕ್ಲೋನ್ ವೇಳೆ ಈ ಕ್ಯಾಂಟೀನ್ ಮಹತ್ತರವಾದ ಪಾತ್ರ ವಹಿಸಿತ್ತು.
ಆಂಧ್ರದಲ್ಲಿ ಬಡವರ ಹಸಿವು ನೀಗಿಸುವ ''ಅಣ್ಣ''
ತಮಿಳುನಾಡಿನ ಅಮ್ಮ ಕ್ಯಾಂಟೀನ್ ಥರನಾಗಿ ಆಂಧ್ರ ಪ್ರದೇಶದಲ್ಲಿ ಟಿಡಿಪಿ ಸರ್ಕಾರ ಅಣ್ಣ ಕ್ಯಾಂಟೀನ್ಗಳನ್ನು ಪ್ರಾರಂಭಿಸಿತ್ತು. ರಾಜ್ಯ ಸರ್ಕಾರ ಅನುದಾನವಿರುವ ಈ ಕ್ಯಾಂಟೀನ್ಗಳು ದಿನಕ್ಕೆ 2.15 ಲಕ್ಷ ಮಂದಿಗೆ ಊಟ ಒದಗಿಸುತ್ತಿವೆ. ಕೇವಲ 5 ರೂಪಾಯಿಗೆ ಊಟ ನೀಡುತ್ತಿದ್ದು ಲಾಕ್ ಡೌನ್ ವೇಳೆಯಲ್ಲಿ ತನ್ನದೇ ಆದ ಛಾಪು ಮೂಡಿಸಿವೆ.
ದೇವರನಾಡಲ್ಲಿ ಹಸಿದವರ ಹೊಟ್ಟೆ ತುಂಬಿಸುತ್ತೆ ಕುಡುಂಬಶ್ರೀ
ಕೇರಳದಲ್ಲಿ ಸುಮಾರು 1074 ಕ್ಯಾಂಟೀನ್ಗಳಲ್ಲಿ ಕುಡುಂಬಶ್ರಿ ಮಿಷನ್ ಆರಂಭಿಸಿದೆ. ಇದು ಸ್ವಸಹಾಯ ಗುಂಪುಗಳಿಂದ ನಡೆಯುತ್ತಿದ್ದು, ಇಲ್ಲಿಗೆ ಬರುವ ಬಡವರಿಗೆ ಕಡಿಮೆ ದರದಲ್ಲಿ ಲಘು ಉಪಹಾರ, ಮಧ್ಯಾಹ್ನದ ಊಟ, ಟೀ, ಕಾಫಿ ಹಾಗೂ ಸಾಂಪ್ರದಾಯಿಕ ತಿನಿಸುಗಳನ್ನು ಒದಗಿಸುತ್ತದೆ.