ಕಾಸರಗೋಡು: ಬೇಸಿಗೆಯ ಆಗಮನದೊಂದಿಗೆ ಕೇರಳದಲ್ಲಿ ಬರ್ ಫ್ಲವರ್ ಅರಳಲು ಪ್ರಾರಂಭಿಸಿದೆ. ಆದರೆ ಕೊರೊನಾ ಕಾರ್ಮೋಡದ ಮಧ್ಯೆ ಹೆಚ್ಚು ಗಮನ ಹರಿಸಬೇಕಾದ ಅಂಶವೆಂದರೆ ಈ ಹೂವು ಕೊರೊನಾ ವೈರಸ್ನಂತೆಯೇ ಕಾಣುತ್ತಿದೆ.
ಬರ್ ಫ್ಲವರ್ ಅಥವಾ ಕದಮ್ ಹೂವು ಪ್ರತಿ ವರ್ಷ ಅರಳುತ್ತದೆ. ಆದರೆ ಸದ್ಯ ಗಮನಾರ್ಹ ವಿಷಯವೆಂದರೆ ಈ ಹೂವು ಕೊರೊನಾ ವೈರಸ್ ಆಕಾರವನ್ನು ಹೋಲುತ್ತದೆ (ಸೂಕ್ಷ್ಮ ದರ್ಶಕದಲ್ಲಿ ಗಮನಿಸಿದಂತೆ). ಎಲ್ಲಾ ತಲೆಗಳನ್ನು ತನ್ನತ್ತ ತಿರುಗಿಸುವಂತೆ ಮಾಡುತ್ತದೆ. ಈ ಮರದ ಹೂ ಬಿಡುವುದು ಮಳೆಯ ಪ್ರಾರಂಭವನ್ನು ಸೂಚಿಸುತ್ತದೆ.
ಈ ಮರ ವಾರಗಳ ಮೊದಲು ಮೊಳಕೆಯೊಡೆಯಲು ಪ್ರಾರಂಭಿಸಿದರೂ ಬೇಸಿಗೆಯ ಮಳೆ ಸುರಿಯಲು ಪ್ರಾರಂಭಿಸಿದ ನಂತರವೇ ಹೂವುಗಳು ಅರಳುತ್ತವೆ.
ಬರ್ ಫ್ಲವರ್ಅನ್ನು ವೈಜ್ಞಾನಿಕವಾಗಿ ಆಂಥೋಸೆಫಾಲಸ್ ಕ್ಯಾಡಾಂಬಾ ಎಂದು ಕರೆಯಲಾಗುತ್ತದೆ. ಇದು ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ಮರದ ತೊಗಟೆಯಿಂದ ಹೊರ ತೆಗೆಯಲಾದ ಕ್ಯಾಡಂಬಜೆನಿಕ್ ಆಮ್ಲ, ಕ್ಯಾಡಮೈನ್ ಮತ್ತು ಕ್ವಿನೋವಿಕ್ ಆಮ್ಲವನ್ನು ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ತೊಗಟೆಯಲ್ಲಿ ಸೊಳ್ಳೆ ಲಾರ್ವಾಗಳನ್ನು ನಾಶ ಮಾಡುವ ಗುಣಗಳಿವೆ.
ಈ ಹೂವುಗಳನ್ನು ಗಾಯಗಳು, ಗರ್ಭಾಶಯದ ಕಾಯಿಲೆಗಳು, ಚರ್ಮ ರೋಗಗಳು, ಸುಟ್ಟ ಗಾಯಗಳು, ರಕ್ತ ಹೀನತೆ ಮತ್ತು ಇತರ ಕೆಲವು ದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.