ನವದೆಹಲಿ: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತದ್ದಂತೆ, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್ ಮತ್ತು ಅಫ್ಘಾನಿಸ್ತಾನ ದೇಶಗಳಿಗೆ ಸಹಾಯ ಮಾಡಲು ಹಾಗೂ ಕೊರೊನಾ ಎದುರಿಸುವ ಸಾಮರ್ಥ್ಯ ಹೆಚ್ಚಿಸಲು ಭಾರತೀಯ ಸೇನೆ ಪ್ರತ್ಯೇಕ ತಂಡಗಳನ್ನು ನಿಯೋಜಿಸಲು ಸಿದ್ಧತೆ ನಡೆಸುತ್ತಿದೆ.
ಕೊರೊನಾ ವೈರಸ್ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲು ಮತ್ತು ಕೊರನಾ ವಿರುದ್ಧ ಹೋರಾಡಲು ಸ್ಥಳೀಯ ವೈದ್ಯರಿಗೆ ತರಬೇತಿ ನೀಡಲು 14 ಸೈನಿಕರನ್ನೊಳಗೊಂಡ ಸೇನಾ ತಂಡವನ್ನು ಭಾರತ ಕಳೆದ ತಿಂಗಳು ಮಾಲ್ಡೀವ್ಸ್‌ಗೆ ಕಳುಹಿಸಿತ್ತು.
ಕುವೈತ್ ಹಾಗೂ ಭಾರತ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರದ ಭಾಗವಾಗಿ ಭಾರತವು ಈ ತಿಂಗಳ ಆರಂಭದಲ್ಲಿ 15 ಸದಸ್ಯರನ್ನೊಳಗೊಂಡ ಸೇನಾ ತಂಡವನ್ನು ಕುವೈತ್‌ಗೆ ಕಳುಹಿಸಿತ್ತು.
ಇದೀಗ ಸ್ನೇಹಪರ ರಾಷ್ಟ್ರಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಭಾರತ ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್ ಮತ್ತು ಅಫ್ಘಾನಿಸ್ತಾನ ದೇಶಗಳಿಗೆ ಕಳುಹಿಸಲು ಸೇನಾ ತಂಡಗಳನ್ನು ಸಿದ್ಧಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.