ನವದೆಹಲಿ: ಹೊಸ ವರ್ಷದ ಆರಂಭದಲ್ಲಿ ಒಂದೆಡೆ ಬ್ರಿಟನ್ ಕೋವಿಡ್ ರೂಪಾಂತರ ವೈರಸ್ ಆತಂಕ ಸೃಷ್ಟಿಸಿದ್ದರೆ, ಮತ್ತೊಂದೆಡೆ ಭಾರತದಲ್ಲಿ ಎರಡು ಲಸಿಕೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆ ಮಾಡಲು ಡಿಸಿಜಿಐ ಅನುಮತಿಸಿರುವುದು ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಇಂದು ಡಿಸಿಜಿಐ ಲಸಿಕೆಗಳ ತುರ್ತು ಬಳಕೆಗೆ ಅನುಮತಿಸುತ್ತಿದ್ದಂತೆ ಪರ-ವಿರೋಧ ಮಾತುಗಳು ಕೇಳಿಬಂದವು. ಈ ಬೆನ್ನಲ್ಲೇ WHO ಸಹ ಭಾರತದ ನಿರ್ಧಾರವನ್ನು ಸ್ವಾಗತಿಸಿತು. ಇದೀಗ ಲಸಿಕೆಗಳ ಅನುಮತಿ ಬಗ್ಗೆ ದೆಹಲಿಯ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಸಹಮತ ವ್ಯಕ್ತಪಡಿಸಿದ್ದಾರೆ.
ನಾವು ಯಾವುದೇ ಲಸಿಕೆಯನ್ನು ಪರಿಗಣಿಸಿದಾಗ, ಅದರ ಸುರಕ್ಷತೆ ಪ್ರಮುಖ ವಿಚಾರವಾಗಿದೆ. ಲಸಿಕೆ ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ವಿವಿಧ ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಯಾವುದೇ ಒಂದು ಲಸಿಕೆಯನ್ನು ವಿವಿಧ ಹಂತಗಳಲ್ಲಿ ಪರೀಕ್ಷೆಗೆ ಒಳಪಡಿಸಿ, ಅದು ಆ ಎಲ್ಲ ಹಂತಗಳಲ್ಲೂ ಯಶಸ್ವಿಯಾದ ಬಳಿಕ ಅದನ್ನು ಮಾನವರ ಮೇಲೆ ಪ್ರಯೋಗಿಸಲಾಗುತ್ತದೆ. ಲಸಿಕೆಯನ್ನು ಅನುಮೋದಿಸುವಾಗ ಎಲ್ಲಾ ಡೇಟಾವನ್ನು ತಜ್ಞರು ವಿಮರ್ಶಾತ್ಮಕವಾಗಿ ನೋಡುತ್ತಾರೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದರು.
ಇದನ್ನೂ ಓದಿ: ಎರಡು ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಡಿಸಿಜಿಐ ಗ್ರೀನ್ ಸಿಗ್ನಲ್
ಇದು ನಮ್ಮ ದೇಶಕ್ಕೆ ಉತ್ತಮ ದಿನ ಮತ್ತು ಹೊಸ ವರ್ಷದ ಆರಂಭದಲ್ಲಿ ಇದೊಂದು ಸಂತಸದ ವಿಚಾರ. ಎರಡೂ ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡು ಲಸಿಕೆಗಳು ಪರಿಣಾಮಕಾರಿಯಾಗಿವೆ ಮತ್ತು ನಿರ್ವಹಿಸಲು ಸುಲಭವಾಗಿವೆ. ನಾವು ಬಹಳ ಕಡಿಮೆ ಅವಧಿಯಲ್ಲಿ ಲಸಿಕೆ ತಯಾರಿಸಲು ಪ್ರಾರಂಭಿಸಬೇಕು ಎಂದು ಗುಲೇರಿಯಾ ತಿಳಿಸಿದರು.