ಔರಂಗಾಬಾದ್: ಐದು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಕೊರೊನಾ ಸೋಂಕಿತ ಮಹಿಳೆ ಇಂದು ವಿಡಿಯೋ ಕಾಲ್ ತನ್ನ ಕಂದಮ್ಮನ ಮುದ್ದು ಮುಖವನ್ನು ನೋಡಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ನ ಆಸ್ಪತ್ರೆಯಲ್ಲಿ ಶನಿವಾರ ಕೊರೊನಾ ಸೋಂಕಿತ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮಗುವಿಗೂ ಕೋವಿಡ್-19 ಪರೀಕ್ಷೆ ಮಾಡಲಾಗಿದ್ದು, ಮಗುವಿಗೆ ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿತ್ತು. ಆದರೂ ಮುಂಜಾಗ್ರತಾ ಕ್ರಮವಾಗಿ ತಾಯಿ ಮತ್ತು ಮಗುವನ್ನು ಪ್ರತ್ಯೇಕ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಈವರೆಗೂ ತಾಯಿ ತನ್ನ ಮಗುವಿನ ಮುಖವನ್ನು ಸಹ ನೋಡದೆ ಮರುಗುತ್ತಿದ್ದರು. ಇದನ್ನು ಗಮನಿಸರುವ ವೈದ್ಯರು ವಿಡಿಯೋ ಕರೆ ಮಾಡಿಕೊಡುವ ಮೂಲಕ ಮಗುವನ್ನು ನೋಡಲು ತಾಯಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಮಗುವನ್ನು ನೋಡುತ್ತಿದ್ದಂತೆಯೇ 'ಕೈಸೆ ಹೋ ಮೇರಾ ಬೇಟಾ' ಎಂದು ತಾಯಿ ಭಾವುಕರಾಗಿದ್ದಾರೆ. ಅಮ್ಮನನ್ನು ಕಂಡ ಮಗುವಿಗೆ ಏನು ಹೇಳಬೇಕೆಂದು ತಿಳಿದಿಲ್ಲವಾದರೂ ಮೊಬೈಲ್ ಅನ್ನು ನೋಡುತ್ತಲೇ ಇತ್ತು. ಈ ಕ್ಷಣವನ್ನು ನೋಡಿದ ವೈದ್ಯರು ಹಾಗೂ ನರ್ಸ್ಗಳೂ ಕೂಡ ಭಾವುಕರಾಗಿದ್ದಾರೆ. ಆದಷ್ಟು ಬೇಗ ಸೋಂಕಿನಿಂದ ಮಹಿಳೆ ಗುಣಮುಖವಾಗಿ, ತಾಯಿ-ಮಗು ಸೇರುವಂತಾಗಲಿ ಎಂಬುದು ಎಲ್ಲರ ಆಶಯ.