ನವದೆಹಲಿ: ಕೊವಿಡ್-19 ನಿಂದಾಗಿ ದೇಶಾದ್ಯಂತ 560 ಜಿಲ್ಲೆಗಳು ಲಾಕ್ಡೌನ್ ಆಗಿದ್ದು, ಸಾವಿನ ಸಂಖ್ಯೆ ಹಾಗೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ, ದೇಶದ ಆರ್ಥಿಕ ಪರಿಸ್ಥಿತಿ ಕುಗ್ಗುತ್ತಿರುವ ಹಿನ್ನೆಲೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಬ್ಯಾಂಕಿಂಗ್ ಹಾಗೂ ವ್ಯಾಪಾರ ಕ್ಷೇತ್ರಗಳಿಗೆ ಹಲವು ವಿಭಾಗಗಳಲ್ಲಿ ತೆರಿಗೆ ವಿನಾಯಿತಿ ಸೇರಿ ವಿವಿಧ ಶುಲ್ಕವನ್ನು ಕಡಿತಗೊಳಿಸಿದ್ದಾರೆ. 2019-20ನೇ ಸಾಲಿನ ಆದಾಯ ತೆರಿಗೆ ವಿನಾಯಿತಿಯನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿದೆ.
ಇದಲ್ಲದೆ ತೆರಿಗೆ ಪಾವತಿ ವಿಳಂಬವಾದರೆ ವಿಧಿಸಲಾಗುತ್ತಿದ್ದ ದಂಡದ ಶುಲ್ಕದಲ್ಲೂ ಕಡಿತ ಮಾಡಲಾಗಿದ್ದು, ಶೇ 12ರಷ್ಟಿದ್ದ ದಂಡವನ್ನು ಶೇ.9ಕ್ಕೆ ಇಳಿಸಲಾಗಿದೆ. ಇನ್ನು ಹೊಸದಾಗಿ ಕಾರ್ಯಾರಂಭ ಮಾಡಿದ್ದ ಕಂಪನಿಗಳು ಬೋರ್ಡ್ ಮೀಟಿಂಗ್ ನಡೆಸುಯವ ಅವಧಿಯನ್ನು 60 ದಿನಗಳ ವರೆಗೆ ಮುಂದೂಡಲಾಗಿದೆ. ಹಾಗೂ ಲಾಕ್ಡೌನ್ ಅವಧಿಯಲ್ಲಿ ರಫ್ತು ಹಾಗೂ ಆಮದುದಾರರಿಗೆ ವ್ಯಾಪಾರ ವಹಿವಾಟು ಸೇರಿದಂತೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ.
ಇನ್ನು ಬಾಂಕ್ ಗ್ರಾಹಕರು ಇತರ ಬ್ಯಾಂಕ್ ಎಟಿಎಂನಿಂದ ಹಣ ವಿಥ್ ಡ್ರಾ ಮಾಡುವಾಗ ವಿಧಿಸಲಾಗುತ್ತಿದ್ದ ಶುಲ್ಕವನ್ನು ಮುಂದಿನ ಮೂರು ತಿಂಗಳವರೆಗೆ ತೆಗೆದು ಹಾಕಲಾಗಿದ್ದು ಡೆಬಿಟ್ ಕಾರ್ಡ್ ಹೊಂದಿರುವವರು ಯಾವುದೇ ಬ್ಯಾಂಕ್ನ ಎಟಿಎಂನಿಂದ ಇತರ ಸೇವಾ ಶುಲ್ಕವಿಲ್ಲದೇ ಹಣ ಡ್ರಾ ಮಾಡಬಹುದಾಗಿದೆ. ಇನ್ನೂ ಬ್ಯಾಂಕ್ನಲ್ಲಿ ಕನಿಷ್ಠ ಮೊತ್ತ ಇಡಬೇಕಾದ ಅವಶ್ಯಕತೆ ಇಲ್ಲ. ಕನಿಷ್ಠ ಮೊತ್ತ ಇಡದಿದ್ದರೂ ಯಾವುದೇ ದಂಡ ಶುಲ್ಕ ವಿಧಿಸುವುದಿಲ್ಲ ಎಂದಿದ್ದಾರೆ. ಇದಲ್ಲದೇ ಡಿಜಿಟಲ್ ಟ್ರೇಡಿಂಗ್ಗೆ ವಿಧಿಸಲಾಗುತ್ತಿದ್ದ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.