ಮುಂಬೈ (ಮಹಾರಾಷ್ಟ್ರ) : ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ಘೋಷಣೆಯಾದಾಗ ಮುಂಚೂಣಿಯಲ್ಲಿ ನಿಂತು ಕಾರ್ಯಾನಿರ್ವಹಿಸಿದವರು ಪೊಲೀಸರು. ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ವೇಳೆ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 988 ಅಧಿಕಾರಿಗಳು ಮತ್ತು 8,578 ಸಿಬ್ಬಂದಿ ಸೇರಿ ಒಟ್ಟು 9,566 ಪೊಲೀಸರು ಸೋಂಕಿಗೆ ತುತ್ತಾಗಿದ್ದಾರೆ.
ಸದ್ಯ, ರಾಜ್ಯದಲ್ಲಿ 224 ಪೊಲೀಸ್ ಅಧಿಕಾರಿಗಳು ಮತ್ತು 1,705 ಸಿಬ್ಬಂದಿ ಸೇರಿ ಒಟ್ಟು 1,929 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 755 ಅಧಿಕಾರಿಗಳು ಮತ್ತು 6,789 ಸಿಬ್ಬಂದಿ ಸೇರಿ ಒಟ್ಟು 7,534 ಮಂದಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಇನ್ನು 9 ಅಧಿಕಾರಿಗಳು ಮತ್ತು 94 ಸಿಬ್ಬಂದಿ ಸೇರಿ ಒಟ್ಟು 103 ಪೊಲೀಸರು ಸೋಂಕಿಗೆ ಬಲಿಯಾಗಿದ್ದಾರೆ.
ಲಾಕ್ ಡೌನ್ ಆರಂಭವಾದಾಗಿನಿಂದ ಇದುವರೆಗೆ ರಾಜ್ಯಾದ್ಯಂತ ಒಟ್ಟು 324 ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳು ದಾಖಲಾಗಿದ್ದು, 883 ಆರೋಪಿಗಳನ್ನು ಬಂಧಿಸಲಾಗಿದೆ. ಹಲ್ಲೆ ಘಟನೆಗಳಲ್ಲಿ ಒಟ್ಟು 86 ಪೊಲೀಸರು ಗಾಯಗೊಂಡಿದ್ದಾರೆ. ಜೊತೆಗೆ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ 65 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಅನಧಿಕೃತ ಸಾಗಣೆದಾರರ ವಿರುದ್ಧ ಕ್ರಮಕೈಗೊಳ್ಳಲಾಗಿದ್ದು, ಇದುವರೆಗೆ ಒಟ್ಟು 32,467 ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 94,257 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 18, 24, 46 ಸಾವಿರ ರೂ. ದಂಡ ಸಂಗ್ರಹ ಮಾಡಲಾಗಿದೆ.