ನವದೆಹಲಿ: ಶೇ 84ರಷ್ಟು ಭಾರತೀಯರು ಕೊರೊನಾ ಮಹಾಮಾರಿಯಿಂದ ಪಾರಾಗಲು 6 ತಿಂಗಳಿಂದ ಒಂದು ವರ್ಷ ಅವಧಿ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ನೂತನ ಸಮೀಕ್ಷೆ ತಿಳಿಸಿದೆ. ವೆಲಾಸಿಟಿ ಎಂ.ಆರ್ ಎಂಬ ಮಾರುಕಟ್ಟೆ ಸಂಶೋಧನೆ ಹಾಗೂ ವಿಶ್ಲೇಷಣಾ ಸಂಸ್ಥೆ ಈ ಸಮೀಕ್ಷೆ ನಡೆಸಿದೆ.
ದೇಶದಲ್ಲಿ ಕೊರೊನಾ ಸೋಂಕಿನ ಬಗ್ಗೆ ಶೇ 94ರಷ್ಟು ಮಂದಿಗೆ ಅರಿವಿದೆ. ಇವರಲ್ಲಿ ಶೇ 75ರಷ್ಟು ಮಂದಿ ರೋಗ ಹರಡದಂತೆ ಕಾಳಜಿ ವಹಿಸುತ್ತಿದ್ದಾರೆ. ಶೇ 52ರಷ್ಟು ಜನರು ವೈರಸ್ ಹರಡುವ ಬಗ್ಗೆ ತಿಳಿದುಕೊಂಡು ಜಾಗೃತರಾಗಿದ್ದಾರೆ ಎಂದು ಹೇಳಿದೆ.
ಈ ಸಮೀಕ್ಷೆ ಸುಮಾರು 2,100 ಮಂದಿಯ ಅಭಿಪ್ರಾಯವನ್ನು ಪಡೆದುಕೊಂಡಿತ್ತು. ಇದಕ್ಕಾಗಿ ದೆಹಲಿ ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಪುಣೆ, ಅಹಮದಾಬಾದ್ ಹಾಗೂ ಜೈಪುರ ನಗರಗಳಿಂದ ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಕೊರೊನಾ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು.
ಶೇ 81ರಷ್ಟು ಮಂದಿ ನಿಯಮಿತವಾಗಿ ಕೈತೊಳೆಯುವುದರಿಂದ ರೋಗ ಹರಡುವುದರಿಂದ ಪಾರಾಗಬಹುದು ಎಂದು ಅಭಿಪ್ರಾಯಪಟ್ಟರೆ, ಶೇ 78ರಷ್ಟು ಮಂದಿ ಜನಸಂಖ್ಯೆ ಹೆಚ್ಚಿರುವ ಸ್ಥಳಗಳಿಂದ ದೂರವಿರುವ ಮೂಲಕ ಸೋಂಕಿನಿಂದ ದೂರ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ವೆಲಾಸಿಟಿ ಎಂಆರ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಜಸಾಲ್ ಶಾ ತಿಳಿಸಿದ್ದಾರೆ.
ಇನ್ನೊಂದು ಅಂಶವೆಂದರೆ ಶೇ 78ರಷ್ಟು ಮಂದಿ ಭವಿಷ್ಯದಲ್ಲಿ ಹೊರದೇಶಗಳಿಗೆ ಪ್ರಯಾಣಿಸುವಾಗ ಎಚ್ಚರಿಕೆಯಿಂದ ಇರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ದಿನನಿತ್ಯದ ಜೀವನದಲ್ಲಿ ಏನೂ ಬದಲಾವಣೆ ಆಗಿಲ್ಲ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಶೇ 58ರಷ್ಟು ಮಂದಿ ದಿನನಿತ್ಯದ ದಿನಸಿಗಳನ್ನು ಇನ್ನೂ ಕೊಂಡುಕೊಂಡಿಲ್ಲ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.