ಮುಂಬೈ: ಇಲ್ಲಿನ ಬಾಂದ್ರಾ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಸಂಖ್ಯೆಯ ವಲಸೆ ಕಾರ್ಮಿಕರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಮಧ್ಯಾಹ್ನದಿಂದಲೇ ಬೃಹತ್ ಸಂಖ್ಯೆಯಲ್ಲಿ ರೈಲು ನಿಲ್ದಾಣಕ್ಕೆ ಆಗಮಿಸಿದ್ದ ಕಾರ್ಮಿಕರು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.
ಪರಿಸ್ಥಿತಿ ತಹಬದಿಗೆ ತರಲು ಲಾಠಿ ಚಾರ್ಜ್ ನಡೆಸಿದ ಪೊಲೀಸರು ಎಲ್ಲರನ್ನೂ ಚದುರಿಸಿದ್ದಾರೆ. ಮಾ.14 ರಂದು ಲಾಕ್ ಡೌನ್ ಮುಗಿದು ರೈಲಿನ ಮೂಲಕ ತಮ್ಮ ತಮ್ಮ ಊರುಗಳಿಗೆ ಮರಳಬೇಕೆಂದು ಕಾರ್ಮಿಕರು ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಲಾಕ್ಡೌನ್ ವಿಸ್ತರಣೆಯಾಗಿದ್ದರಿಂದ ರೈಲು ಸಂಚಾರ ಸಹ ಆರಂಭವಾಗದೆ ಆಕ್ರೋಶಗೊಂಡ ಕಾರ್ಮಿಕರು ಪ್ರತಿಭಟನೆ ನಡೆಸಲಾರಂಭಿಸಿದರು ಎಂದು ಹೇಳಲಾಗಿದೆ.
ರಾಜಕೀಯ ಕೆಸರೆರಚಾಟ:
ಮುಂಬೈನಲ್ಲಿರುವ ವಲಸೆ ಕಾರ್ಮಿಕರ ಇಂದಿನ ಪ್ರತಿಭಟನೆಯು ಕಾವೇರಿದ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ವಲಸೆ ಕಾರ್ಮಿಕರು ತಮ್ಮೂರಿಗೆ ಮರಳಲು ಸಾಧ್ಯವಾಗುವಂತೆ 24 ಗಂಟೆ ರೈಲು ಓಡಿಸುವಂತೆ ಸಿಎಂ ಉದ್ಧವ್ ಠಾಕ್ರೆ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದರು. ಆದರೆ ನಮ್ಮ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸದ ಕಾರಣದಿಂದಲೇ ಕಾರ್ಮಿಕರು ಪ್ರತಿಭಟನೆ ನಡೆಸುವಂತಾಗಿದೆ ಎಂದು ಸಚಿವ ಆದಿತ್ಯ ಠಾಕ್ರೆ ಕೇಂದ್ರದ ವಿರುದ್ಧ ಆರೋಪ ಮಾಡಿದ್ದಾರೆ.