ಕಾನ್ಪುರ (ಉತ್ತರ ಪ್ರದೇಶ): ಪೊಲೀಸ್ ತಂಡದ ಮೇಲಿನ ಘೋರ ದಾಳಿಯಲ್ಲಿ ಗಾಯಗೊಂಡ ಕಾನ್ಪುರ ಜಿಲ್ಲೆಯ ಬಿಥೂರ್ ಪೊಲೀಸ್ ಠಾಣೆಯ ಅಧಿಕಾರಿ ಕೌಶಲೇಂದ್ರ ಪ್ರತಾಪ್ ಸಿಂಗ್, ಜು.2 ರ ಮಧ್ಯರಾತ್ರಿಯ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬಗ್ಗೆ ಪೊಲೀಸ್ ಠಾಣೆಗೆ ದೂರವಾಣಿ ಕರೆ ಬಂದಿತ್ತು. ಆ ದಿನ ಚೌಬೆಪುರ ಪೊಲೀಸ್ ಠಾಣೆಯಿಂದ ದಾಳಿಗೆ ತಂಡದೊಂದಿಗೆ ಬರಲು ಕೇಳಿಕೊಳ್ಳಲಾಗಿತ್ತು. ನಮ್ಮ ತಂಡವು ಆ ರಾತ್ರಿ (ಜುಲೈ 2ರ ಮಧ್ಯರಾತ್ರಿ) ದಾಳಿ ನಡೆಸಲು ಹೊರಟಿತ್ತು (ವಿಕಾಸ್ ದುಬೆ ಅವರ ನಿವಾಸದಲ್ಲಿ). ನಾವು ನಮ್ಮ ಕಾರುಗಳನ್ನು ದಾಳಿ ನಡೆಸುವ ಸ್ಥಳದ ಬಳಿ ನಿಲ್ಲಿಸಿ ಅವರ ಮನೆಯ ಕಡೆಗೆ ನಡೆಯಲು ಪ್ರಾರಂಭಿಸಿದೆವು.
ಪೊಲೀಸರು ಬರುವ ಮಾರ್ಗದ ಹಲವೆಡೆ ತಡೆವೊಡ್ಡಲಾಗಿತ್ತು. ಒಬ್ಬ ವ್ಯಕ್ತಿಗೆ ಮಾತ್ರ ಇನ್ನೊಂದು ಬದಿಗೆ ಹೋಗಬಹುದಾದ ರೀತಿಯಲ್ಲಿ ಜೆಸಿಬಿಯನ್ನು ಅಡ್ಡಲಾಗಿ ನಿಲ್ಲಿಸಲಾಗಿತ್ತು. ನಾವು ಅವರ ಮನೆಯ ಬಳಿ ನಿಲ್ಲಿಸಿದ್ದ ಜೆಸಿಬಿಯನ್ನು ದಾಟಿದ ಕೂಡಲೇ ನಮ್ಮ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಘಟನೆಯಲ್ಲಿ 8 ಮಂದಿ ಪೊಲೀಸರು ಹತರಾರದರು ಎಂದು ಪ್ರತಾಪ್ ಸಿಂಗ್ ಘಟನೆಯ ಬಗ್ಗೆ ವಿವರಿಸಿದರು.
ಘಟನೆಯ ಹಿನ್ನೆಲೆ: ಕುಖ್ಯಾತ ರೌಡಿ ವಿಕಾಸ್ ದುಬೆ ಎಂಬಾತನನ್ನು ಬಂಧಿಸಲು ಹೋದಾಗ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ 8 ಮಂದಿ ಪೊಲೀಸರು ಗುಂಡಿನ ದಾಳಿಯಲ್ಲಿ ಹತ್ಯೆಯಾಗಿದ್ದರು. ಈ ಸಂಬಂಧ ವಿಕಾಸ್ ದುಬೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ದುಬೆ ನಿವಾಸವನ್ನ ನೆಲಸಮಗೊಳಿಸಲಾಗಿದೆ. ಆತನ ಸುಳಿವು ನೀಡಿದವರಿಗೆ 50 ಸಾವಿರ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿದೆ.
ಇಬ್ಬರು ಆತನ ಸಹಚರರನ್ನು ಎನ್ಕೌಂಟರ್ ಮಾಡಲಾಗಿದೆ. ಕೆಲ ಸಹಚರರನ್ನು ಬಂಧಿಸಲಾಗಿದೆ.