ನವದೆಹಲಿ: ಕೊರೊನಾ ಸೋಂಕಿನ ಭೀತಿಯಲ್ಲಿ ಇರಾನ್ನಲ್ಲಿ ಸಿಲುಕಿರುವ ಭಾರತೀಯ ಮೂಲದ ವಿದ್ಯಾರ್ಥಿಗಳ ಸಂಪರ್ಕದಲ್ಲಿರುವಂತೆ ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಸೂಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ಕೊರೊನಾ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಈ ಸೂಚನೆ ನೀಡಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ನವೀನ್ ಚಾವ್ಲಾ ಈ ಆದೇಶ ನೀಡಿದ್ದು, ಈ ಕುರಿತು ಕ್ರಮ ಕೈಗೊಂಡು ಮಾರ್ಚ್ 17ಕ್ಕೆ ವರದಿ ಸಲ್ಲಿಸಬೇಕೆಂದು ಸೂಚಿಸಿದ್ದಾರೆ.
ಇರಾನ್ನಲ್ಲಿರುವ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ಕೊರೊನಾ ಸೋಂಕಿನಿಂದ ರಕ್ಷಣೆ ಮಾಡುವಂತೆ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಇರಾನ್ನಲ್ಲಿರುವ ಎಲ್ಲ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಅಭಯ ನೀಡಿದೆ. ಕೇಂದ್ರ ಸರ್ಕಾರಕ್ಕೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಕೇಂದ್ರ ಗೃಹ ಇಲಾಖೆ, ವಿದೇಶಾಂಗ ಇಲಾಖೆ, ಆರೋಗ್ಯ ಸಚಿವಾಲಯ, ವಿಮಾನಯಾನ ಇಲಾಖೆಗಳಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಅಲ್ಲಿನ ವಿದ್ಯಾರ್ಥಿಗಳನ್ನು ಕೊರೊನಾ ಸೋಂಕಿನಿಂದ ರಕ್ಷಿಸಲು ಸಕಾರಾತ್ಮಕ ಯೋಜನೆಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಮುಂದಿನ ವಿಚಾರಣೆ ಮಾರ್ಚ್ 17ಕ್ಕೆ ನಡೆಯಲಿದ್ದು ಅಲ್ಲಿನ ವಿದ್ಯಾರ್ಥಿಗಳನ್ನು ಭಾರತಕ್ಕೆ ವಾಪಸ್ ಕರೆತರುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.
ಆದಷ್ಟು ಬೇಗ ವಿದ್ಯಾರ್ಥಿಗಳನ್ನ ಭಾರತಕ್ಕೆ ಕರೆಸುತ್ತೇವೆ: ವಿದೇಶಾಂಗ ಸಚಿವರ ಭರವಸೆ
ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ವಿದೇಶಾಂಗ ಸಚಿವ ಎಸ್.ಜಯಶಂಕರ್ ಇತ್ತೀಚೆಗೆ ನಾನು ಭಾರತೀಯ ಮೂಲದ ವಿದ್ಯಾರ್ಥಿಗಳ ಪೋಷಕರೊಂದಿಗೆ ಮಾತನಾಡಿದ್ದು ಆದಷ್ಟು ಬೇಗ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂಬ ಮಾಹಿತಿ ನೀಡಿದರು.