ನವದೆಹಲಿ: ನೇಮಕಗೊಂಡ ಕಾಂಗ್ರೆಸ್ ಅಧ್ಯಕ್ಷರಿಗೆ ಪಕ್ಷದಲ್ಲಿ ಶೇ. 1ರಷ್ಟು ಕೂಡ ಬೆಂಬಲ ಇಲ್ಲದಿರಬಹುದು ಎಂದು ಪ್ರತಿಪಾದಿಸಿದ ಕಾಂಗ್ರೆಸ್ ಹಿರಿಯ ನಯಕ ಗುಲಾಮ್ ನಬಿ ಆಜಾದ್ ಭಿನ್ನಮತೀಯ ಪತ್ರಕ್ಕೆ ಸಹಿ ಹಾಕಿದವರಲ್ಲಿ ಒಬ್ಬರಾಗಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿ ಎಲ್ಲಾ ಹುದ್ದೆಗಳಿಗೂ ಚುನಾವಣೆ ನಡೆಯಬೇಕು. ಇಲ್ಲದಿದ್ದರೆ ಪಕ್ಷದ ಏಳಿಗೆ ಸಾಧ್ಯವಿಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸುವವರು ತಾವು ಎಲ್ಲಿ ಹುದ್ದೆ ಕಳೆದುಕೊಳ್ಳುತ್ತೇವೆಯೋ ಎಂಬ ಭಯದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಚುನಾಯಿತ ಜನಪ್ರತಿನಿಧಿಗಳು ಪಕ್ಷವನ್ನು ಮುನ್ನಡೆಸಿದರೆ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ. ಇಲ್ಲದಿದ್ದರೆ ಕಾಂಗ್ರೆಸ್ ಇನ್ನೂ 50 ವರ್ಷ ಪ್ರತಿಪಕ್ಷ ಸ್ಥಾನದಲ್ಲಿಯೇ ಕುಳಿತುಕೊಳ್ಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನೀವು ಚುನಾವಣೆಗೆ ಸ್ಪರ್ಧಿಸಿದಾಗ ಪಕ್ಷದ ಶೇ. 51ರಷ್ಟು ಮಂದಿ ಬೆಂಬಲ ಸಿಕ್ಕವರು ಆರಿಸಿ ಬರುತ್ತಾರೆ. ಕೇವಲ ಇಬ್ಬರಿಂದ ಮೂವರು ವಿರೋಧಿಸುತ್ತಾರೆ. ಶೇ. 51ರಷ್ಟು ಮತ ಪಡೆದ ವ್ಯಕ್ತಿ ಆಯ್ಕೆಯಾಗುತ್ತಾನೆ. ಉಳಿದವರಿಗೆ ಶೇ. 10ರಿಂದ 15ರಷ್ಟು ಮತಗಳು ಸಿಗುತ್ತವೆ. ಚುನಾವಣೆಯಲ್ಲಿ ಗೆದ್ದು ಪಕ್ಷದ ಅಧ್ಯಕ್ಷರಾದ ನಾಯಕನ ಜೊತೆ ಶೇ. 51ರಷ್ಟು ಸದಸ್ಯರಿರುತ್ತಾರೆ. ಹೀಗಾಗಿ ಚುನಾವಣೆ ನಡೆಸಿದರೆ ಲಾಭವಾಗುತ್ತದೆ. ಚುನಾವಣೆ ನಡೆಸದೆ ನೇಮಕಗೊಳ್ಳುವ ಅಧ್ಯಕ್ಷರಿಗೆ ಶೇ. 1ರಷ್ಟು ಬೆಂಬಲ ಇಲ್ಲದಿರಬಹುದು. ಸಿಡಬ್ಲ್ಯೂಸಿ ಸದಸ್ಯರನ್ನು ಆಯ್ಕೆ ಮಾಡಿದರೆ ಅವರನ್ನು ತೆಗೆದುಹಾಕಲಾಗುವುದಿಲ್ಲ. ಆದ್ದರಿಂದ ಆಗುವ ಸಮಸ್ಯೆ ಏನು ಎಂದು ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.
ಚುನಾವಣೆಯಲ್ಲಿ ಎರಡನೇ, ಮೂರನೇ ಅಥವಾ ನಾಲ್ಕನೇ ಸ್ಥಾನದಲ್ಲಿರುವ ಇತರರು ನಾವು ಕಷ್ಟ ಪಟ್ಟು ಕೆಲಸ ಮಾಡಿ ಪಕ್ಷವನ್ನು ಬಲಪಡಿಸಬೇಕು. ಮುಂದಿನ ಬಾರಿ ಗೆಲ್ಲುತ್ತೇವೆ ಎಂದು ಭಾವಿಸುತ್ತಾರೆ. ಆದರೆ ಈಗ ಚುನಾಯಿತರಾದ ಅಧ್ಯಕ್ಷರಿಗೆ ಪಕ್ಷದ ಕಾರ್ಯಕರ್ತರ ಬೆಂಬಲವೂ ಇಲ್ಲ ಎಂದು ಹೇಳಿದರು. ಈ ಮೂಲಕ ಚುನಾವಣೆಗಳು ಪಕ್ಷದ ಅಡಿಪಾಯವನ್ನು ಬಲಪಡಿಸುತ್ತವೆ ಎಂದು ಪುನರುಚ್ಚರಿಸಿದ್ದಾರೆ.