ದೆಹಲಿ: ಮಧ್ಯಪ್ರದೇಶದ ಬಿಜೆಪಿ ನಾಯಕಿ ವಿರುದ್ಧ ಮಾಜಿ ಸಿಎಂ ಕಮಲ್ನಾಥ್ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಮಧ್ಯೆ ಮಾತನಾಡಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ, ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿರೋದು ಇಡೀ ದೇಶಕ್ಕೆ ಗೊತ್ತಿದೆ. ನಮ್ಮ ಸರ್ಕಾರ ಆಡಳಿತ ನಡೆಸುತ್ತಿದ್ದ ವೇಳೆ ಆಪರೇಷನ್ ಕಮಲ ಮಾಡಿ, 20 ರಿಂದ 50 ಕೋಟಿ ನೀಡಿ ಶಾಸಕರನ್ನ ಖರೀದಿಸಿದ್ದಾರೆ. ಚುನಾವಣೆಯಲ್ಲಿ ಸೋತಾಗ ಮಾತ್ರ ಅರ್ಥಹೀನ ಮಾತುಗಳನ್ನ ಆಡಿ, ಮೊಸಳೆ ಕಣ್ಣೀರು ಸುರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಸುಮಾರು 23 ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದ ಇಮಾರ್ತಿ ದೇವಿ, ಮಾರ್ಚ್ 2020 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈಗ ಬಿಜೆಪಿಯೊಂದಿಗೆ ಅವರೂ ಸೇರಿ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಅವರೇ, ನಿಮಗೆ ನಿಜವಾಗಿಯೂ ಮಹಿಳೆಯರ ಮೇಲೆ ಗೌರವವಿದ್ದರೆ, ನಿಮ್ಮ ರಾಜ್ಯದ ಮಹಿಳೆಯರನ್ನ ಗೌರವದಿಂದ ನಡೆಸಿಕೊಳ್ಳಿ, ಅವರಿಗೆ ರಕ್ಷಣೆ ಕೊಡಿ ಎಂದು ಶ್ರೀನಾತೆ ಒತ್ತಾಯಿಸಿದರು.
ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕಮಲನಾಥ್ ಹೇಳಿಕೆ ಖಂಡಿಸಿ ಇಂದು ಮೌನ ಪ್ರತಿಭಟನೆ ನಡೆಸಿದರು. ಜತೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದು, ಕಮಲ್ನಾಥ್ ಅವ್ರನ್ನ ಪಕ್ಷದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.