ನವದೆಹಲಿ: ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಜನರಿಗೆ ಏನೂ ಮಾಡಿಲ್ಲ. ಆದ್ರೆ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಜ್ ಹುಸೇನ್ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ಕಠಿಣ ಪರಿಸ್ಥಿಯಲ್ಲಿ ಕಾಂಗ್ರೆಸ್ ನಡೆದುಕೊಳ್ಳುತ್ತಿರುವ ರೀತಿಯನ್ನು ಪ್ರತಿಯೊಬ್ಬರು ನೋಡುತ್ತಿದ್ದಾರೆ. ಕೋವಿಡ್-19 ವಿಚಾರದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವರು ಹೋರಾಟಕ್ಕೆ ಮುಂದಾಗಿರುವುದರಿಂದ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಜನರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಬೇಕೆಂಬ ಕಾಂಗ್ರೆಸ್ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಹುಸೇನ್, ಸಮಾಜದ ಎಲ್ಲ ವರ್ಗದ ಜನರಿಗೂ ಮೋದಿ ಸರ್ಕಾರ ನೆರವು ನೀಡುತ್ತಿದೆ. ವಿಶೇಷವಾಗಿ ಬಡವರಿಗೆ ಸಹಾಯ ಮಾಡುತ್ತಿದೆ. ಸಾಧ್ಯವಾಗುವ ಎಲ್ಲ ಮಾರ್ಗಗಳಿಂದಲೂ ಜನರಿಗೆ ಸರ್ಕಾರ ನೆರವು ನೀಡುತ್ತಿದೆ. ಪಡಿತರ ಮತ್ತು ಇತರ ಅವಶ್ಯಕವಾದ ವಸ್ತುಗಳನ್ನು ನೀಡುವ ವ್ಯವಸ್ಥೆ ಮಾಡಿದೆ.
ತನ್ನ ಆಡಳಿತ ಇರುವ ರಾಜ್ಯಗಳಲ್ಲಿ ಕಾಂಗ್ರೆಸ್ ಏನೂ ಮಾಡುತ್ತಿಲ್ಲ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಮೋದಿ ವಿರುದ್ಧ ಹೋರಾಡುವುದನ್ನು ಬಿಟ್ಟು ಕೆೊರೊನಾ ವೈರಸ್ ವಿರುದ್ಧ ಹೋರಾಡಲಿ ಎಂದಿದ್ದಾರೆ.