ನವದೆಹಲಿ: ಮುಂದಿನ ತಿಂಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣೆ ಗೆಲ್ಲಲು ಕಾಂಗ್ರೆಸ್ ಭರದ ಸಿದ್ಧತೆ ನಡೆಸುತ್ತಿವೆ.
ಕಳೆದ 2015ರ ವಿಧಾನಸಭಾ ಚುನಾವನೆಯಲ್ಲಿ ಕನಿಷ್ಠ ಒಂದು ಸ್ಥಾನವನ್ನು ಗೆಲ್ಲುವಲ್ಲೂ ರಾಷ್ಟ್ರಿಯ ಪಕ್ಷ ಕಾಂಗ್ರೆಸ್ ವಿಫಲವಾಗಿತ್ತು. ಹೀಗಾಗಿ ಆಡಳಿತರೂಢ ಎಎಪಿ ಹಾಗೂ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಭಾರಿ ಕಸರತ್ತು ನಡೆಸುತ್ತಿದ್ದಾರೆ.
ಕಳೆದ ಶನಿವಾರ ದೆಹಲಿಯಲ್ಲಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದ್ದು, ಈ ಬಾರಿಯ ಚುನಾವಣೆ ಸಂಬಂಧ ಚರ್ಚೆಗಳು ನಡೆದಿವೆ. ಕನಿಷ್ಠ 18 ಕ್ಷೇತ್ರಗಳಿಗೆ ಬೇಕಾದ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದೆ. ಕಾಂಗ್ರೆಸ್ ಚುನಾವಣಾ ಸಮಿತಿಯ ಮುಂದಿನ ಸಭೆ ಜನವರಿ 14ರಂದು ನಡೆಯಲಿದ್ದು, ಕನಿಷ್ಠ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಫೆಬ್ರವರಿ 8 ರಂದು ಮತದಾನ...
ಫೆಬ್ರವರಿ 8 ರಂದು ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು, 11ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಮತದಾನದ ವೇಳಾಪಟ್ಟಿ ಬಿಡುಗಡೆಯೊಂದಿಗೆ ದೆಹಲಿಯಲ್ಲಿ ಮಾದರಿ ನೀತಿಸಂಹಿತೆ ಜಾರಿಗೆ ಬರಲಿದೆ.
ನಾಮಪತ್ರ ಸಲ್ಲಿಸಲು ಜನವರಿ 21 ಕಡೆಯ ದಿನವಾಗಿದ್ದು, 22ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 24 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
2015ರಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ...
ಕಳೆದ 2015ರ ವಿಧಾನಸಭಾ ಚುನಾವಣೆಯಲ್ಲಿ, ಒಟ್ಟು 70 ಕ್ಷೇತ್ರಗಳಲ್ಲಿ 67 ಕ್ಷೇತ್ರಗಳಲ್ಲಿ ಗೆದ್ದ ಆಮ್ ಆದ್ಮಿ ಪಾರ್ಟಿ ಸರ್ಕಾರ ರಚಿಸಿತ್ತು. ರಾಷ್ಟ್ರೀಯ ಪಕ್ಷ ಬಿಜೆಪಿ ಕೇವಲ 3 ಕ್ಷೇತ್ರಗಳಲ್ಲಿ ಗೆದ್ದರೆ, 1998ರಿಂದ 2013ರವರೆಗೂ 15 ವರ್ಷ ರಾಜಧಾನಿಯಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಕೈ ಪಾಳಯ ಒಂದೂ ಕ್ಷೇತ್ರವನ್ನೂ ಗೆಲ್ಲಲಾಗದೆ ಮುಜುಗರಕ್ಕೊಳಗಾಗಿತ್ತು.