ನವದೆಹಲಿ: ಕಾಂಗ್ರೆಸ್ ಮುಖಂಡರೊಬ್ಬರು ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಜರುಗಿದ ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಹಾಜರಾಗಿ ಮಾಹಿತಿ ಮುಚ್ಚಿಟ್ಟಿದ್ದ ಪ್ರಕರಣ ಇದೀಗ ಬಯಲಾಗಿದೆ.
ದೇಶವನ್ನೇ ಆತಂಕದ ಕಡಲಲ್ಲಿ ಮುಳುಗಿಸಿದ ತಬ್ಲಿಘಿ ಘಟನೆಯಲ್ಲಿ ಪಾಲ್ಗೊಂಡ ಮಾಹಿತಿ ಗೌಪ್ಯವಾಗಿಟ್ಟ ಆರೋಪದಡಿ ಆತನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಈತ ವಾಸವಿದ್ದ ನಜಾಫ್ಗಢ ಪ್ರದೇಶ, ದೀನ್ಪುರವನ್ನು 'ಕಂಟೈನ್ಮೆಂಟ್ ವಲಯ' ಎಂದು ಘೋಷಿಸಲಾಗಿದೆ.
ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಭೆಯ ವಿಷಯ ಬೆಳಕಿಗೆ ಬಂದ ನಂತರ ಜಿಲ್ಲಾ ಪೊಲೀಸರು ಈ ಕಾರ್ಯಕ್ರಮಕ್ಕೆ ಹಾಜರಾದ ಜನರನ್ನು ಪತ್ತೆ ಹಚ್ಚುತ್ತಿದ್ದಾರೆ. ಈ ವೇಳೆ ಇದೇ ಪ್ರದೇಶದ ಐವರು ಪಾಲ್ಗೊಂಡಿರುವುದು ಕಂಡುಬಂದಿದೆ. ಅದ್ರಲ್ಲೂ ಈತನೂ ಒಬ್ಬನಾಗಿದ್ದ.
ಮಾಹಿತಿ ಮುಚ್ಚಿಟ್ಟಿದ್ದರಿಂದ ಪತ್ನಿ, ಮಗುವಿಗೂ ತಗುಲಿದ ಸೋಂಕು:
ಸೋಂಕಿತ ಕಾಂಗ್ರೆಸ್ ಮುಖಂಡನ ಪತ್ನಿ ನಂಗ್ಲಿ ಸಕ್ರಾವತಿ ಪಾಲಿಕೆಯಲ್ಲಿ ಕೌನ್ಸಿಲರ್ ಆಗಿದ್ದಾರೆ. ಪೊಲೀಸ್ ವಿಚಾರಣೆ ಮತ್ತು ವೈದ್ಯಕೀಯ ವರದಿಯ ಮೂಲಕ ಕೆಲ ದಿನಗಳ ನಂತರ ಈತನಿಗೆ ಸೋಂಕು ತಗುಲಿರುವುದು ದೃಢಪಟ್ಟಿತು. ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಮಾಹಿತಿ ಮುಚ್ಚಿಟ್ಟ ಪರಿಣಾಮ ಆತನ ಪತ್ನಿ ಮತ್ತು ಮಗುವಿಗೂ ಸೋಂಕು ತಗುಲಿದೆ. ಈತನ ಸಂಪರ್ಕದಲ್ಲಿದ್ದವರ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.