ನವದೆಹಲಿ: ಭಾರತದಲ್ಲಿನ ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಿ ಟ್ವೀಟ್ ಮಾಡುವ ಮೂಲಕ ಭಾರತದಲ್ಲಿ ಕೋಲಾಹಲ ಎಬ್ಬಿಸಿದ್ದ ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ, ಭಾರತೀಯ ಗಣಿಗಳಲ್ಲಿ ಬಾಲಕಾರ್ಮಿಕರಿಂದ ಹೊರತೆಗೆಯಲ್ಪಡುವ ಮೈಕಾವನ್ನು ಬಳಸಿದ್ದಾರೆಂದು ಆರೋಪಿಸಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ (ಎನ್‌ಸಿಪಿಸಿಆರ್)ಲ್ಲಿ ದೂರು ದಾಖಲಾಗಿದೆ.
ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕನೂಂಗೊ ಈ ಕುರಿತು ಮಾಹಿತಿ ನೀಡಿದ್ದಾರೆ. ದೂರಿನ ಪ್ರಕಾರ ರಿಹಾನ್ನಾ ಬಳಸುವ ಸೌಂದರ್ಯ ಉತ್ಪನ್ನಗಳು ಜಾರ್ಖಂಡ್ನ ಬಾಲಕಾರ್ಮಿಕರು ತಯಾರಿಸಿದ ಮೈಕಾವನ್ನು ಬಳಸಿ ತಯಾರಿಸುವ ಕಾಸ್ಮೆಟಿಕ್ಸ್ಗಳಾಗಿವೆ. ರಿಹಾನ್ನಾ ಒಡೆತನದ ಸೌಂದರ್ಯವರ್ಧಕ ಉತ್ಪನ್ನ ಸಂಸ್ಥೆ, ಸೌಂದರ್ಯವರ್ಧಕ ವಸ್ತುಗಳಲ್ಲಿ ಬಳಸುವ "ಮೈಕಾ'' ಎಂಬ ವಸ್ತುವನ್ನು ಜಾರ್ಖಂಡ್ ನಿಂದ ತರಿಸಿಕೊಳ್ಳುತ್ತದೆ. ಈ ರೀತಿ ತರಿಸಿಕೊಳ್ಳುವ ಮೈಕಾವನ್ನು ಜಾರ್ಖಂಡ್ನಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಸಣ್ಣ-ಸಣ್ಣ ಸುರಂಗಗಳಿಂದ ಬಾಲಕಾರ್ಮಿಕರು ಹೊರತೆಗೆಯುತ್ತಾರೆ.
ಜಾರ್ಖಂಡ್ನಲ್ಲಿ ಸಿಗುವ ಮೈಕಾಗೆ ಹೆಚ್ಚಿನ ಬೇಡಿಕೆ ಇದ್ದು, ಬಡತನದ ಕಾರಣ ಜಾರ್ಖಂಡ್ ನ ಕುಗ್ರಾಮಗಳಿಂದ ಬರುವ ಅದೆಷ್ಟೋ ಬಾಲಕಾರ್ಮಿಕರು ಈ ಮೈಕಾ ಗಣಿಗಾರಿಕೆಯಲ್ಲಿ ತೊಡಗಿದ್ದು ಜೀವವನ್ನು ಕೈಲಿಡಿದು ಸುರಂಗಗಳೊಳಗೆ ನುಗ್ಗಿ ಮೈಕಾವನ್ನು ಹೆಕ್ಕಿ ತೆಗೆಯುತ್ತಾರೆ. ಹೀಗಾಗಿ ರೈತರ ಪರಿಸ್ಥಿತಿ ಬಗ್ಗೆ ಅವಲೋಕಿಸುವ ಸಂವೇದನೆ ಹೊಂದಿರುವ ರಿಹಾನ್ನಾಗೆ ಅಪಾಯಕಾರಿ ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ಮಕ್ಕಳ ಸ್ಥಿತಿ ಅರಿವಿಗೆ ಬರುತ್ತಿಲ್ಲವೇ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.