ನವದೆಹಲಿ: ಕೋವಿಡ್-19 ಲಸಿಕೆಯನ್ನು ಸಮಯೋಚಿತವಾಗಿ ತಯಾರಿಸಲು ಜಾಗತಿಕ ವೈಜ್ಞಾನಿಕ ಸಮುದಾಯದೊಂದಿಗೆ ಕೆಲಸ ಮಾಡಲು ಬದ್ಧವಾಗಿದ್ದೇವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
"ಜಾಗತಿಕ ಲಸಿಕೆ ಸಿದ್ಧತೆಯಲ್ಲಿ ಭಾರತ ಮುಂಚೂಣಿಯಲ್ಲಿರಬೇಕು. ಲಸಿಕೆ ಸಮಯೋಚಿತವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವಲ್ಲಿ ಜಾಗತಿಕ ವೈಜ್ಞಾನಿಕ ಸಮುದಾಯದೊಂದಿಗೆ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ" ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಹೇಳಿದರು.
ಲಸಿಕೆ ಅಭಿವೃದ್ಧಿಯ ಹೊಸ ವಿಧಾನಗಳ ಕುರಿತು ಐಸಿಎಂಆರ್ ಆನ್‌ಲೈನ್ ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ಜಗತ್ತಿನ ಪ್ರಮುಖ ಲಸಿಕೆ ವಿಜ್ಞಾನಿಗಳು ಮತ್ತು ಸಂಶೋಧಕರು ಇದರಲ್ಲಿ ಭಾಗಿಯಾಗಿದ್ದರು.
ಎಲ್ಲಾ ಲಸಿಕೆ ಪ್ರಯೋಗ, ರೋಗಿಗಳ ಸುರಕ್ಷತೆ ಮತ್ತು ನೈತಿಕ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದು ತಜ್ಞರು ಒಪ್ಪಿಕೊಂಡರು. ಲಸಿಕೆ ಅಭಿವೃದ್ಧಿ ಮತ್ತು ಸನ್ನದ್ಧತೆಗೆ ಭಾರತ ನೀಡಿದ ಕೊಡುಗೆಗಳನ್ನು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸಂಶೋಧಕರು ಶ್ಲಾಘಿಸಿದರು.
ಸಾಂಕ್ರಾಮಿಕ ಪರಿಸ್ಥಿತಿಗಳಲ್ಲಿ ಲಸಿಕೆ ಅಭಿವೃದ್ಧಿ ಸಾಮಾನ್ಯ ಸಮಯಕ್ಕಿಂತ ಹೆಚ್ಚು ಸವಾಲಿನದು ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ. ಕೆ.ವಿಜಯ್ ರಾಘವನ್ ಹೇಳಿದರು.