ಆಲಪ್ಪುಳ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದ ಮೊದಲ 'ವಾಟರ್ ಟ್ಯಾಕ್ಸಿ' ಸೇವೆ ಹಾಗೂ ರಾಜ್ಯ ಜಲ ಸಾರಿಗೆ ಇಲಾಖೆಯ (ಎಸ್‌ಡಬ್ಲ್ಯುಟಿಡಿ) ಕ್ಯಾಟಮರನ್ ದೋಣಿ ಸೇವೆಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಆಲಪ್ಪುಜ ಅಥವಾ ಅಲೆಪ್ಪಿ ಹಿನ್ನೀರಿನಲ್ಲಿ (ಬ್ಯಾಕ್ ವಾಟರ್) ವಾಟರ್ ಟ್ಯಾಕ್ಸಿ ಮತ್ತು ಕ್ಯಾಟಮರನ್ ದೋಣಿ ಸೇವೆಗೆ ಚಾಲನೆ ನೀಡಲಾಗಿದೆ. ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್, ರಸ್ತೆ ಸಾರಿಗೆಯಲ್ಲಿನ ಮಾಲಿನ್ಯ ಮತ್ತು ಟ್ರಾಫಿಕ್ಗಳನ್ನು ಗಮನದಲ್ಲಿಟ್ಟುಕೊಂಡು ನಾವು ಜಲ ಸಾರಿಗೆಯ ಸಾಧ್ಯತೆಗಳನ್ನು ಅನ್ವೇಷಿಸುತ್ತಲೇ ಇರಬೇಕು. ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ಇದು ನಮ್ಮ ರಾಜ್ಯದ ಹೆಮ್ಮೆ ಎಂದು ಹೇಳಿದರು.
3 ಕೋಟಿ 14 ಲಕ್ಷ ರೂ ವೆಚ್ಚದಲ್ಲಿ ನಾಲ್ಕು ವಾಟರ್ ಟ್ಯಾಕ್ಸಿಗಳನ್ನು ಸಿದ್ಧಪಡಿಸಲಾಗಿದೆ. 14 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಜಲ ಸಾರಿಗೆ ಇಲಾಖೆ ಏಳು ಕ್ಯಾಟಮರನ್ ದೋಣಿಗಳನ್ನು ತಯಾರಿಸಿದೆ. ಅಲ್ಟ್ರಾ ಮಾಡರ್ನ್ ವ್ಯವಸ್ಥೆಗಳೊಂದಿಗೆ ತಯಾರಾದ 100 ಜನರು ಕುಳಿತುಕೊಳ್ಳುವ ಸಾಮರ್ಥ್ಯವಿರುವ ಕ್ಯಾಟಮರನ್ ದೋಣಿಗಳು ಇವಾಗಿವೆ.
ಉದ್ಘಾಟನೆ ವೇಳೆ ರಾಜ್ಯ ಜಲ ಸಾರಿಗೆ ಇಲಾಖೆ ಸಚಿವ ಸಸೀಂದ್ರನ್, ಹಣಕಾಸು ಸಚಿವ ಟಿ.ಎಂ. ಥಾಮಸ್ ಐಸಾಕ್, ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಜಲ ಸಾರಿಗೆ ಇಲಾಖೆ ನಿರ್ದೇಶಕರು ಉಪಸ್ಥಿತರಿದ್ದರು.