ನವದೆಹಲಿ: ಚೀನಾದ 70ನೇ ಸಂಸ್ಥಾಪನಾ ದಿನವನ್ನು ಟಿಯಾನನ್‌ಮೆನ್ ವೃತ್ತದಲ್ಲಿ ಚೀನಿಯರು ಸಂಭ್ರಮದಿಂದ ಆಚರಿಸಿದರು. ತನ್ನ ದೈತ್ಯ ಮಿಲಿಟರಿ ಶಕ್ತಿಯ ನಾಲ್ಕನೇ ಗೌರವ ವಂದನೆ ಸ್ವೀಕರಿಸಿದ ಅಧ್ಯಕ್ಷ ಕ್ಸಿ ಚಿನ್ಪಿಂಗ್ ದೇಶದ ಜನತೆಯನ್ನು ಉದ್ದೇಶಿಸಿ, 'ಈ ಮಹಾನ್ ರಾಷ್ಟ್ರದ ಅಡಿಪಾಯವನ್ನು ಯಾವುದೇ ಶಕ್ತಿಯಿಂದ ಅಲುಗಾಡಿಸಲು ಸಾಧ್ಯವಿಲ್ಲ. ಇಂದು, ಸಮಾಜವಾದಿ ಚೀನಾ ಪ್ರಪಂಚದ ಮುಂದೆ ತಲೆ ಎತ್ತಿ ನಿಂತಿದೆ. ಚೀನಾ, ತನ್ನ ಮಿಲಿಟರಿ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿಯ ಹಿತಾಸಕ್ತಿಗಳನ್ನು ದೃಢವಾಗಿ ಕಾಪಾಡಿಕೊಳ್ಳಲಿದೆ ಮತ್ತು ವಿಶ್ವ ಶಾಂತಿಯ ನಿಲುವಿಗೆ ದೃಢವಾಗಿರಲಿದೆ' ಎಂದು ಭರವಸೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಚೀನಾ, ಅಮೆರಿಕದ ಪ್ರಬಲ ಕಾರ್ಯತಂತ್ರಗಳನ್ನು ಪ್ರಶ್ನಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿನ ಎಂತಹದೇ ಭೌಗೋಳಿಕ-ಆರ್ಥಿಕ ಹಿತಾಸಕ್ತಿಯನ್ನು ರಕ್ಷಿಸಲು ಅದು ಹಿಂಜರಿಯುವುದಿಲ್ಲ. ತೈವಾನ್‌ನಿಂದ ದಕ್ಷಿಣ ಚೀನಾ ಸಮುದ್ರದ ಕರಾವಳಿಯವರೆಗೂ ಭಾರತದ ಈಶಾನ್ಯದ ಮೆಕ್ ಮೋಹನ್ ರೇಖೆಯ ಜಲಾನಯನ ಪ್ರದೇಶವರೆಗಿನ ಎಲ್ಲ ವಿರೋಧಿಗಳಿಗೆ ಮೇಲಿನ ಹೇಳಿಕೆ ಮುಖೇನ ಜಿನ್ಪಿಂಗ್ ಅವರು, ಸ್ಪಷ್ಟ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಬೀಜಿಂಗ್‌ನ ಟಿಯಾನನ್‌ಮೆನ್ ವೃತ್ತದಲ್ಲಿ ಸುಮಾರು 15,000 ಮಿಲಿಟರಿ ಸಿಬ್ಬಂದಿ, 160ಕ್ಕೂ ಹೆಚ್ಚು ಯುದ್ಧ ವಿಮಾನಗಳು ಹಾಗೂ 580ಕ್ಕೂ ಅಧಿಕ ಶಸ್ತ್ರಾಸ್ತ್ರ ಉಪಕರಣಗಳ ಮೆರವಣಿಗೆ ನಡೆಸಿ ತನ್ನ ಸೈನಿಕ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಪ್ರದರ್ಶಿಸಿತು. ಚೀನಾ ಈಗ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿದ್ದು, ಅಮೆರಿಕದ ಸರಿಸಮ ನಿಂತು ಅದರ ಕಾರ್ಯತಂತ್ರವನ್ನೇ ಪ್ರಶ್ನಿಸುವಂತಹ ಸುಧಾರಿತ ಮಿಲಿಟರಿ ತಾಕತ್ ಗಳಿಸಿದೆ. 1990ರ ದಶಕದಲ್ಲಿ ಆರಂಭವಾದ ಪಿಎಲ್‌ಎ ಆಧುನಿಕರಣ ಪ್ರಕ್ರಿಯೆ, 2035ರ ವೇಳೆಗೆ ವಿಶ್ವ ದರ್ಜೆಯ ಮಿಲಿಟರಿ ಶಕ್ತಿಶಾಲಿ ಆಗುವತ್ತ ಗುರಿ ಇರಿಸಿಕೊಂಡಿದೆ. ಭಾರತಕ್ಕೆ ಈ ಮಿಲಿಟರಿ ಶಕ್ತಿ ಪ್ರದರ್ಶನವು ತನ್ನ ಗಡಿ ರಕ್ಷಣಾ ಕೋಟೆಯನ್ನು ಸುರಕ್ಷಿತಗೊಳಿಸಿಕೊಳ್ಳುವ ಎಚ್ಚರಿಕೆಯ ಕರೆ ಗಂಟೆಯಾಗಿದೆ.
ಚೀನಾ ಬತ್ತಳಿಕೆಯಲ್ಲಿರುವ ಕೆಲವು ಯುದ್ಧ ಸಾಮಗ್ರಿಗಳು ಭವಿಷ್ಯದ ಯುದ್ಧ ತಂತ್ರಗಳನ್ನು ಬದಲಿಸಲಿವೆ. 2014ರ ಮಾರ್ಗಸೂಚಿಯಡಿ 'ಮಾಹಿತಿ ತಂತ್ರಜ್ಞಾನ ಮತ್ತು ಸಮಗ್ರ ಜಂಟಿ ಕಾರ್ಯಾಚರಣೆಯ ಹೈ-ಟೆಕ್ ತಂತ್ರಜ್ಞಾನದ ಮುಖೇನ ಸ್ಥಳೀಯವಾಗಿ ಸುಧಾರಿತವಾದ ಯುದ್ಧೋಪಕರಣಗಳನ್ನು ತಯಾರಿಸಿದೆ. ತೊಂಬತ್ತರ ದಶಕದಲ್ಲಿದ್ದ ಚೀನಾ ರಣತಂತ್ರವು ಈಗ ಸಂಪೂರ್ಣವಾಗಿ ಬದಲಾಗಿದೆ. ಅದು ಮಿಲಿಟರಿ ತಂತ್ರಜ್ಞಾನದಲ್ಲಿ ಬಹುದೂರ ಸಾಗಿದೆ. 2019ರಲ್ಲಿ ಅದು 'ಸಿಸ್ಟಮ್ ಆಫ್ ಸಿಸ್ಟಮ್ಸ್' ಹಾಗೂ 'ಸಿಸ್ಟಮ್ ಡಿಸ್ಟ್ರಕ್ಷನ್ ವಾರ್ಫೇರ್' ಬಗ್ಗೆ ಮಾತನಾಡುತ್ತಿದೆ. ಚೀನಾ ಈ ಕಲ್ಪನೆಗಳನ್ನು ಕೇವಲ ಕಾಗದದಲ್ಲಿ ಉಳಿಸಿಕೊಳ್ಳದೇ ಅವುಗಳನ್ನು ಕಾರ್ಯರೂಪಕ್ಕೆ ತಂದಿದೆ.
ಸಂಸ್ಥಾಪನ ದಿನದ ಪಥ ಸಂಚಲನದಂದು ಸಿಸ್ಟಮ್ ವರ್ಸಸ್ ಸಿಸ್ಟಮ್ ಕಾರ್ಯಾಚರಣೆಗಳಲ್ಲಿ ವೇಗ, ಗೌಪ್ಯತೆ, ಮಾಹಿತಿಯ ಪ್ರಾಬಲ್ಯ, ದೀರ್ಘ ಕಾಲ ಬಾಳಿಕೆಯ ಶ್ರೇಣಿ, ನಿಖರತೆ ಮತ್ತು ಜಂಟಿ ಕಾರ್ಯಾಚರಣೆಗಳಲ್ಲಿ ಮೇಲುಗೈ ಸಾಧಿಸುವಂತಹ ಸಂಯೋಜಿತ ಯುದ್ಧ ಸಾಮಗ್ರಿಗಳ ಸಾಮರ್ಥ್ಯವನ್ನು ಲೋಕಕ್ಕೆ ಅನಾವರಣಗೊಳಿಸಿತು. ಆಧುನಿಕ ಮಾವೋವಾದಿ ಮಿಲಿಟರಿಯಲ್ಲಿ ಅತ್ಯಂತ ಆಸಕ್ತಿಯಾಗಿ ಕಂಡಿದ್ದು ಡಿಎಫ್ -17 ಹೈಪರ್ಸಾನಿಕ್ ಗ್ಲೈಡ್ ವೆಹಿಕಲ್. ಇದು ಶಬ್ದದ ವೇಗಕ್ಕಿಂತ ಐದು ಪಟ್ಟು ಹೆಚ್ಚಿನ ವೇಗದಲ್ಲಿ (3,800 ಎಂಪಿಎಚ್ಗಿಂತ ವೇಗವಾಗಿ) ಸಾಗುವ ಸಿಡಿತಲೆಯ ಕ್ಷಿಪಣಿ. ಅಮೆರಿಕದ ಹೈಪರ್ಸಾನಿಕ್ ಮಿಸೈಲ್ಗಿಂತ ಬಲಿಷ್ಠವಾಗಿದೆ.
ಪರಮಾಣು ಸಿಡಿತಲೆಯ ಶಸ್ತ್ರಸಜ್ಜಿತವಾದ ಡಿಎಫ್-17 ಹೆಚ್‌ಜಿವಿ, ಅಮೆರಿಕ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸುವ ಮಿತ್ರ ರಾಷ್ಟ್ರಗಳಿಗೆ ಗಂಭೀರವಾದ ಅಪಾಯ ತಂದೂಡಲಿದೆ. ಹೈಪರ್ಸಾನಿಕ್ ವೇಗದ ಮುಂದೆ ಇತರೆ ಮಿಸೈಲ್ಗಳು ಸಪ್ಪೆ ಎನಿಸುತ್ತವೆ. ಇದು ಏಷ್ಯಾ- ಪೆಸಿಫಿಕ್ನಲ್ಲಿ ಅಮೆರಿಕದ ವಿಮಾನವಾಹಕ ನೌಕೆಯ ಗುಂಪನ್ನು ದುರ್ಬಲಗೊಳಿಸಲಿದೆ.
ಚೀನಿಯರು ಇದೇ ವೇಳೆ ಡಿಎಫ್- 41 ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು (ಐಸಿಬಿಎಂ) ಪ್ರದರ್ಶಿಸಿದ್ದಾರೆ. ಇದು ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಯಾಗಿದ್ದು, ಹತ್ತು ಪರಮಾಣು ಸಿಡಿತಲೆಗಳನ್ನು ಹೊತ್ತು 30 ನಿಮಿಷದಲ್ಲಿ ಅಮೆರಿಕ ತಲುಪುವಂತಹ ವೇಗ ಹೊಂದಿದೆ. ರಷ್ಯಾದ ಎಸ್‌ಎಸ್ -18 ಸೈತಾನ ಅನ್ನು ಇದೇ ಐಸಿಬಿಎಂ ಹಿಂದಿಕ್ಕಿದೆ. ಪ್ರದರ್ಶನದಲ್ಲಿನ ಮತ್ತೊಂದು ಗೇಮ್ ಚೇಂಜರ್ ಗೊಂಗ್ಜಿ-11 ಸ್ಟೆಲ್ತ್ ಅಟ್ಯಾಕ್ ಡ್ರೋಣ್. ಎದುರಾಳಿಗೆ ಗುರುತು ಸಿಗದಂತೆ ಅವರ ಬಿಡಾರಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಈಶಾನ್ಯ ಪ್ರದೇಶದಲ್ಲಿ ಭಾರತದ ಕಾರ್ಯತಂತ್ರ ತಡೆಗಟ್ಟಲು ಗಂಭೀರ ಸವಾಲೊಡ್ಡಲಿದೆ.
ನೌಕಾಪಡೆ ಮತ್ತು ವಾಯುಪಡೆ ಜತೆಗೆ ಸೂಪರ್ಸಾನಿಕ್ ವೇಗದಲ್ಲಿ ಕಾರ್ಯನಿರ್ವಹಿಸಬಲ್ಲ ಪಿಎಲ್‌ಎ ರಾಕೆಟ್ ಫೋರ್ಸ್ನ ಡಿಆರ್- 8 ಎಂಬ ಸೂಪರ್ಸಾನಿಕ್ ವೀಕ್ಷಣಾ ಡ್ರೋನ್, ಅಮೆರಿಕದ ಕ್ಯಾರಿಯರ್ ಯುದ್ಧ ಸಮೂಹವವನ್ನು ಪತ್ತೆಹಚ್ಚಲು ಮತ್ತು ಸ್ಟ್ರೈಕ್ ಪಡೆಗಳಿಗೆ ಮಾಹಿತಿಯನ್ನು ರವಾನಿಸಲು ನೆರವಾಗಲಿದೆ. ಡಿಎಫ್ -17, ಶಾರ್ಪ್ ಸ್ವೋರ್ಡ್ ಮತ್ತು ಇತರೆ ಕೆಲ ಡ್ರೋನ್ಗಳು ಇಂತಹ ತಂತ್ರಜ್ಞಾನ ಹೊಂದಿವೆ. ಟ್ಯಾಂಕ್ರಗಳು ಮತ್ತು ಶಸ್ತ್ರಸಜ್ಜಿತ ಫೈಟರ್ ಜೆಟ್ಗಳು, ಜೆ -20 ಸ್ಟೆಲ್ತ್ ಫೈಟರ್, ಎಚ್- 6 ಎನ್ನಂತಹ ಅಣ್ವಸ್ತ್ರಗಳು, ವೈಜೆ-18 ಸೂಪರ್ಸಾನಿಕ್ ಆಂಟಿ ಶಿಪ್ ಕ್ರೂಸ್ ಕ್ಷಿಪಣಿಗಳು ಮತ್ತು ಮಧ್ಯಂತರ ಶ್ರೇಣಿಯ ಡಿಎಫ್-26 ಹಡಗು ವಿರೋಧಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರದರ್ಶಿಸಿತು.
ಚೀನಾದಲ್ಲಿನ ಮಿಲಿಟರಿ ಪ್ರಗತಿಗಳು ಏನೇ ಇದ್ದರೂ ಭಾರತ, 2017ರಲ್ಲಿ ನಡೆದ ದೋಕ್ಲಾಮ್ ಗಡಿ ವಿವಾದದಂತಹ ಭವಿಷ್ಯದ ಸಂಗತಿಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಲಿದೆ. ಚೀನಾದ ಮಿಲಿಟರಿ ಸಾಮರ್ಥ್ಯ ಭಾರತದ ಭವಿಷ್ಯತಿಗೆ ದೊಡ್ಡ ಸವಾಲಾಗಬಹುದು.
ಅಮೆರಿಕ ಎ2ಎಡಿ, (ಆಂಟಿ-ಆಕ್ಸೆಸ್/ಏರಿಯಾ ನಿರಾಕರಣೆ ವಲಯ) ನಿರ್ಬಂಧಿಸುವ ಕಾರ್ಯತಂತ್ರ ಕಂಡುಕೊಳ್ಳಬೇಕು. ಚೀನಾ ಗಡಿಯೊಳಗಿನ ಸಶಸ್ತ್ರ ತಯಾರಿ ಮತ್ತು ಮಿಲಿಟರಿ ಸಾಮರ್ಥ್ಯ ವೃದ್ಧಿಯು ಭಾರತ ತ್ವರಿತ ಮಿಲಿಟರಿ ಆಧುನೀಕರಣಕ್ಕೆ ತನ್ನನ್ನು ತಾನು ಒಗ್ಗಿಕೊಳ್ಳಬೇಕು ಎಂಬುದನ್ನು ಸೂಚಿಸುತ್ತಿದೆ. ಚೀನಾದೊಂದಿಗೆ ದೂರದ ಅಮೆರಿಕ ಸೇರಿದಂತೆ ನೆರೆಯ ಜಪಾನ್, ತೈವಾನ್, ದಕ್ಷಿಣ ಕೊರಿಯಾ, ವಿಯೆಟ್ನಾಂ ಮತ್ತು ಭಾರತ ಸಹ ತಗಾದೆ ಇರಿಸಿಕೊಂಡಿವೆ. ಚೀನಾವನ್ನು ಅಧಿಕವಾಗಿ ನಿರ್ಲಕ್ಷಿಸಿದಷ್ಟು ಈ ರಾಷ್ಟ್ರಗಳಿಗೆ ಹೆಚ್ಚಿನ ಅಪಾಯ ತಪ್ಪಿದಲ್ಲ.
-ಕರ್ನಲ್ ದನ್ವೀರ್ ಸಿಂಗ್, ರಕ್ಷಣಾ ತಜ್ಞ