ತೇಜ್‌ಪುರ (ಅರುಣಾಚಲ ಪ್ರದೇಶ): ಗಾಲ್ವನ್ ಸಂಘರ್ಷದ ನಂತರ ಭಾರತದೊಂದಿಗೆ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ ಅರುಣಾಚಲ ಪ್ರದೇಶದ ಸುಬನ್ಸಿರಿ ಜಿಲ್ಲೆಯ ಲೆನ್ಸಿ ನದಿಯ ಬಳಿ ಜಲವಿದ್ಯುತ್ ಯೋಜನೆ ಮತ್ತು ರಸ್ತೆಯೊಂದನ್ನು ಚೀನಾ ನಿರ್ಮಿಸಿದೆ ಎಂದು ಬಿಜೆಪಿ ಸಂಸದ ತಾಪೀರ್ ಗಾವೋ ಆರೋಪಿಸಿದ್ದಾರೆ.
ಸೋಮವಾರ ಈಟಿವಿ ಭಾರತ್‌ಗೆ ಈ ವಿಷಯವನ್ನು ಬಹಿರಂಗಪಡಿಸಿದ ಅವರು ಅರುಣಾಚಲ ಪ್ರದೇಶದ ಭೂಪ್ರದೇಶದಲ್ಲಿ ಚೀನಾ ಮಾಡಿದ ಯೋಜನೆಗಳ ಛಾಯಾಚಿತ್ರಗಳನ್ನು ಸಂಗ್ರಹಿಸಿ ಕೇಂದ್ರ ಗೃಹ ಸಚಿವಾಲಯ, ರಕ್ಷಣಾ ಇಲಾಖೆ, ಲೋಕಸಭಾ ಸ್ಪೀಕರ್ ಹಾಗೂ ಸೇನಾ ಮುಖ್ಯಸ್ಥರಿಗೆ ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಏಷ್ಯಾ ಪೆಸಿಫಿಕ್ ಭಾಗದಲ್ಲಿ ಭಾರತ, ಚೀನಾದ ಕೋವಿಡ್ ವ್ಯಾಕ್ಸಿನ್ಗಳ ಹವಾ
ಭಾರತದ ಹಲವಾರು ಪ್ರದೇಶಗಳು ಈಗ ಚೀನಾದ ನಿಯಂತ್ರಣದಲ್ಲಿವೆ. ಈ ಹಿಂದೆ ಮೋಜಾ ಎಂದು ಕರೆಯಲ್ಪಡುವ ಭಾರತದ ಭೂಪ್ರದೇಶದ ನಮ್ಮ ಸೇನೆಯ ಅಧೀನದಲ್ಲಿತ್ತು. ಈಗ ಆ ಪ್ರದೇಶವನ್ನು ಚೀನಿಯರು ಆಕ್ರಮಿಸಿಕೊಂಡಿದ್ದಾರೆ. ಈಗ ಮತ್ತೆ ಜಲವಿದ್ಯುತ್ ಯೋಜನೆ ಮತ್ತು ಎರಡು ಪಥದ ರಸ್ತೆಯನ್ನು ನಿರ್ಮಿಸಿದ್ದಾರೆ ಎಂದು ಗಾವೋ ಹೇಳಿದ್ದಾರೆ.
1984ರಿಂದ ಚೀನಾದ ಆಕ್ರಮಣಶೀಲತೆ ಮುಂದುವರೆದಿದೆ. ಆದರೆ ಈಗ ನಿರ್ಮಾಣವಾಗಿರುವ ಜಲವಿದ್ಯುತ್ ಯೋಜನೆ ಮತ್ತು ರಸ್ತೆಯ ನಿರ್ಮಾಣವು ಆತಂಕಕಾರಿಯಾಗಿದೆ ಎಂದು ಗಾವೋ ಆಕ್ಷೇಪ ವ್ಯಕ್ತಪಡಿಸಿದ್ದಾರೆ.