ನೆಲ್ಲೂರು (ಆಂಧ್ರಪ್ರದೇಶ): ಸಿಮೆಂಟ್ ಜಗಲಿ ಮೇಲೆ ಮಲಗಿರುವ ಪತಿಯನ್ನು ನೋಡಿಕೊಳ್ಳುತ್ತಾ ಎದ್ದೇಳಲು ಆಗದೆ... ನಡೆಯಲು ಆಗದೆ... ಹೊರ ನಡೆಯೋಕೆ ಶಕ್ತಿ ಇಲ್ಲದೇ ಕಷ್ಟಪಡುತ್ತಿರುವ ಈ ವೃದ್ಧೆಯ ಹೆಸರು ಚೋಟಿಬಿ.
ಆಂಧ್ರದ ನೆಲ್ಲೂರು ನಗರದ ಧನಲಕ್ಷ್ಮಿಪುರಂದಲ್ಲಿ ಪತಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಇವರಿಗೆ ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದಿದ್ದರಲೇ ಸಂತೋಷವಾಗಿ ಜೀವನ ಮಾಡುತ್ತಿದ್ದರು. ಇದ್ದ ಆಸ್ತಿಯನ್ನೆಲ್ಲಾ ಮಾರಿ ಎಲ್ಲರಿಗೂ ಮದುವೆ ಮಾಡಿದ್ದಾರೆ. ತಮ್ಮ ಜವಾಬ್ದಾರಿಯನ್ನು ನೆರವೇರಿಸಿ ವೃದ್ಧಾಪ್ಯದಲ್ಲಿ ಸಂತೋಷವಾಗಿ ಇರಬೇಕಿದ್ದ ಇವರ ಬದುಕು ಇದೀಗ ಬೀದಿಗೆ ಬಂದಿದೆ. ನಗರದ ಪಶುವೈದ್ಯಕೀಯ ಆಸ್ಪತ್ರೆಯ ಗೋಡೆಯೇ ಹಣ್ಣೆಲೆಗಳಿಗೆ ನೆರಳಾಗಿದೆ.
ನಡು ರಸ್ತೆಯಲ್ಲಿ ಬಿಟ್ಹೋದ್ರು:
ತಮ್ಮ ಕುಟುಂಬಕ್ಕಾಗಿ ಇಷ್ಟೆಲ್ಲ ಮಾಡಿದ್ರೂ ಹೆತ್ತ ಮಕ್ಕಳಿಗೆ ಮಾತ್ರ ಒಂದಿಷ್ಟು ಕನಿಕರ ಬಾರದಿರುವುದು ದುರತಂವೇ ಸರಿ. 80 ವರ್ಷದ ತಂದೆ, 70 ವರ್ಷದ ತಾಯಿಯನ್ನು ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ರಾತ್ರೋರಾತ್ರಿ ಆಟೋದಲ್ಲಿ ಕರೆದುಕೊಂಡು ಬಂದು ಕಸದಂತೆ ರಸ್ತೆಗೆ ಎಸೆದು ಹೋಗಿದ್ದಾರೆ. ಆಸ್ತಿಯನ್ನು ಮಾರಾಟ ಮಾಡಿಸಿ ಇದ್ದ ಸಾಲಗಳನ್ನು ತೀರಿಸಿರುವ ಗಂಡು ಮಕ್ಕಳು ತಂದೆ - ತಾಯಿಯನ್ನು ತಮ್ಮ ಬಳಿಯೇ ಇರಿಸಿಕೊಳ್ಳಬೇಕೆಂಬ ಆಲೋಚನೆ ಮಾತ್ರ ಬಂದೇ ಇಲ್ಲ. ಗಂಡು ಮಕ್ಕಳು ನೋಡ್ತಾರೆ ಅಂತ ಹೆಣ್ಣು ಮಕ್ಕಳು, ಹೆಣ್ಮಕ್ಕಳು ನೋಡ್ತಾರೆ ಅಂತ ಗಂಡು ಮಕ್ಕಳು. ಹೀಗೆ ಒಬ್ಬರ ಮೇಲೊಬ್ಬರ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಇವರ ಪರಿಸ್ಥಿತಿಯನ್ನು ಕಂಡ ಸ್ಥಳೀಯರು ಅನ್ನ ನೀಡುತ್ತಿದ್ದು, ಹೇಗೋ ಜೀವನ ಸಾಗಿಸುತ್ತಿದ್ದಾರೆ.
ಇದ್ದ ಆಸ್ತಿಯನ್ನು ಗುಡಿಸಿ ಗುಂಡಾಂತರ ಮಾಡಿದ್ರು:
ತುಂಬಾ ಪ್ರೀತಿಯಿಂದ ಮಕ್ಕಳನ್ನು ಬೆಳೆಸಿದ್ದ ಈ ವೃದ್ಧರು, ಎಲ್ಲವನ್ನು ಅವರಿಗೆ ಕೊಟ್ಟಿದ್ದಾರೆ. ಬ್ಯಾಂಕ್‌ನಲ್ಲಿ ಕೂಡಿಟ್ಟಿದ್ದ ಹಣವನ್ನು ಕೂಡ ನೀಡಿದ್ದಾರೆ. ಮಕ್ಕಳು ಇವರಿಂದ ಎಲ್ಲವನ್ನು ಪಡೆದಿದ್ದಾರೆ. ನಾವು ಸಂಪಾದಿಸಿದ್ದು ನಮ್ಮದ್ದೇ ಆದ್ರೂ ನಮ್ಮ ಮಕ್ಕಳದ್ದೇ ಆದ್ರೂ ಎಲ್ಲಾ ಒಂದೇ ಅಂತ ಇವ್ರು ತಿಳಿದುಕೊಂಡಿದ್ರು. ಆದರೆ, ಇವರು ಅಂದುಕೊಂಡಂತೆ ಯಾವುದೇ ಆಗಿಲ್ಲ. ಪ್ರಸ್ತುತ ಯಾರಾದ್ರೂ ಒಪ್ಪೊತ್ತಿನ ಊಟ ಕೊಡ್ತಾರಾ ಅಂತ ದಾರಿ ದಾರಿ ನೋಡುತ್ತಿವೆ ಈ ವೃದ್ಧ ಜೀವಗಳು.
ಇವರ ಹೀನಾಯ ಸ್ಥಿತಿಯನ್ನು ಕಂಡವರೆಲ್ಲ ಅಯ್ಯೋಪಾಪ ಎನ್ನುತ್ತಿದ್ದರೂ ಹೆತ್ತ ಮಕ್ಕಳಿಗೆ ಮಾತ್ರ ಕನಿಕರ ಇಲ್ಲದೇ ಹೋಗಿದೆ. ಬಿಸಿಲಲ್ಲಿ ಬೇಯುತ್ತಾ. ರಾತ್ರಿ ವೇಳೆ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಕೊನೆಯ ದಿನಗಳನ್ನು ಕಳೆಯುತ್ತಿದ್ದಾರೆ. ಇವರನ್ನ ಕಂಡು ಮಮ್ಮಲು ಮರಗಿದ ಕೆಲವರು ಊಟ ನೀಡುತ್ತಿದ್ದಾರೆ. ಯಾರಾದ್ರೂ ಸಂಘ ಸಂಸ್ಥೆ ಅಥವಾ ಅನಾಥ ಆಶ್ರಮ ನಡೆಸುತ್ತಿದ್ದವರು ಇವರನ್ನು ಕರೆದುಕೊಂಡು ಹೋಗಲಿ ಅಂತ ಸ್ಥಳೀಯರು ಮನವಿ ಮಾಡುತ್ತಿದ್ದಾರೆ. ಮಕ್ಕಳೇ ಸರ್ವಸ್ವ ಅಂತ ಇದ್ದ ಎಲ್ಲವನ್ನು ಅವರಿಗಾಗಿ ಅರ್ಪಿಸಿ ಇದೀಗ ಬೀದಿ ಬಿಕಾರಿಗಳಾಗಿರೋದು ನಿಜಕ್ಕೂ ಮಹಾ ದುರಂತವೇ ಸರಿ.