ತೆಲಂಗಾಣ: ತೆಲಗು ದೇಶಂ ಪಕ್ಷದ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಪಘಾತದ ವೇಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಬೆಂಗಾವಲು ವಾಹನಗಳ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿರುವ ಘಟನೆ ನಡೆದಿದೆ.
ತೆಲಂಗಾಣದ ಯಾದಾದ್ರಿ ಭೋಂಗೀರ್ ಜಿಲ್ಲೆಯಲ್ಲಿ ಇಂದು ಸಂಜೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮೂವರು ರಾಷ್ಟ್ರೀಯ ಭದ್ರತಾ (ಎನ್ಎಸ್ಜಿ) ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿಜಯವಾಡ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಚೌತುಪ್ಪಲ್ ಬ್ಲಾಕ್ನ ದಾಂಡುಮಲ್ಕಾಪುರಂದ ಮೂಲಕ ಅಮರಾವತಿ ನಿವಾಸದಿಂದ ಹೈದರಾಬಾದ್ಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಏಳು ವಾಹನಗಳ ಒಂದರ ಹಿಂದೆ ಒಂದರಂತೆ ಚಲಿಸುತ್ತಿದ್ದವು. ಮೂರು ಮುಂದೆ ಮತ್ತು ಮೂರು ಕಾರು ಹಿಂದೆ ಇದ್ದವು. ಚಂದ್ರಬಾಬು ನಾಯ್ಡು ನಡುವಿನ ನಾಲ್ಕನೇ ಕಾರಿನಲ್ಲಿದ್ದರು. ಹೆದ್ದಾರಿಯಲ್ಲಿ ಹಸು ದಾಟುತ್ತಿದ್ದ ಕಾರಣ ಅದಕ್ಕೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಮೊದಲ ಕಾರಿನ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ. ಹೀಗಾಗಿ ಅದರ ಹಿಂದಿನ ಕಾರು ಮೊದಲ ಕಾರಿಗೆ ಡಿಕ್ಕಿ ಹೊಡೆದಿದೆ. ಆದರೆ ಚಂದ್ರಬಾಬು ಚಲಿಸುತ್ತಿದ್ದ ವಾಹನದ ಬ್ರೇಕ್ ಕೂಡ ಹಠಾತ್ನೇ ಹಾಕಲಾಗಿದೆ. ಆದರೆ ಅದು ಮುಂದಿನ ಕಾರಿಗೆ ಡಿಕ್ಕಿ ಹೊಡೆದಿಲ್ಲ. ಹೀಗಾಗಿ ಅವರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ತಿಳಿದು ಬಂದಿದೆ. ಇದರ ಬೆನ್ನಲ್ಲೇ ಅವರು ಮತ್ತೊಂದು ಕಾರಿನಲ್ಲಿ ಹೈದರಾಬಾದ್ಗೆ ಪ್ರಯಾಣಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.