ಅಮರಾವತಿ (ಆಂಧ್ರ ಪ್ರದೇಶ): ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಹಾಗೂ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೇಂದ್ರ ಬಜೆಟ್ ನಿರಾಶಾದಾಯಕವಾಗಿದೆ ಹಾಗೂ ಆಂಧ್ರ ಪ್ರದೇಶದ ಜನರ ಇಚ್ಛೆಗೆ ಅನುಗುಣವಾಗಿಲ್ಲ ಎಂದು ಹೇಳಿದರು.
ಬಜೆಟ್ ಆಂಧ್ರ ಪ್ರದೇಶದ ಜನರ ಇಚ್ಛೆಗೆ ಅನುಗುಣವಾಗಿಲ್ಲ. ಕೇಂದ್ರ ಸರ್ಕಾರವು ಈಶಾನ್ಯ ರಾಜ್ಯಗಳಿಗೆ ಬಜೆಟ್ ಹಂಚಿಕೆ ಮಾಡಿ, ಆಂಧ್ರ ಪ್ರದೇಶವನ್ನು ನಿರ್ಲಕ್ಷಿಸಿದೆ. ಹಾಗಾಗಿ ಈ ಬಜೆಟ್ ರಾಜ್ಯದ ಜನತೆಗೆ ತೀವ್ರ ಅಸಮಧಾನ ಉಂಟುಮಾಡಿದೆ ಎಂದು ಅಭಿಪ್ರಾಯಪಟ್ಟರು.
ಆಂಧ್ರ ಪ್ರದೇಶ ಮರುಸಂಘಟನಾ ಕಾಯ್ದೆಯಡಿಯಲ್ಲಿ ಬರುವ ವಿಶೇಷ ಸ್ಥಾನಮಾನ ಹಾಗೂ ಇತರ ಸಮಸ್ಯೆಗಳನ್ನು ಬಜೆಟ್ನಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆದಾಯದ ಕೊರತೆಯ ಕುರಿತು ಬಜೆಟ್ನಲ್ಲಿ ಉಲ್ಲೇಖವಾಗಲಿಲ್ಲ. ಒಟ್ಟು 16,000 ಕೋಟಿ ಆದಾಯ ಕೊರತೆಯಲ್ಲಿ 4,000 ಕೋಟಿ ಮಾತ್ರ ಮಂಜೂರು ಮಾಡಲಾಗಿದೆ ಎಂದರು.
ಬುಡಕಟ್ಟು ವಿಶ್ವವಿದ್ಯಾನಿಲಯ ಹಾಗೂ ಕೇಂದ್ರ ವಿಶ್ವವಿದ್ಯಾನಿಲಯಗಳಿಗೆ ಕೇವಲ 13 ಕೋಟಿ ಮಾತ್ರ ಮೀಸಲಿರಿಸಲಾಗಿದೆ. ಐಐಟಿ, ಎನ್ಐಟಿ, ಐಐಎಮ್ ಹಾಗೂ ಐಐಐಟಿ ಮೊದಲಾದ ಶಿಕ್ಷಣ ಸಂಸ್ಥೆಗಳಿಗೂ ಬಜೆಟ್ ಹಂಚಿಕೆಯಾಗಲಿಲ್ಲ ಎಂದು ಹೇಳಿದರು.
ಅಮರಾವತಿ ಹಾಗೂ ಪೋಲವರಂ ಯೋಜನೆಗಳ ಕಾರ್ಯ ನಾಲ್ಕು ತಿಂಗಳ ಹಿಂದೆಯೇ ಸ್ಥಗಿತಗೊಂಡಿದ್ದರೂ, ಇದಕ್ಕೂ ಕೂಡಾ ಕೇಂದ್ರ ಸರ್ಕಾರ ಯಾವುದೇ ಹಂಚಿಕೆ ಮಾಡಲಿಲ್ಲ. ವಿಶಾಖಪಟ್ಟಣಂ ಮತ್ತು ವಿಜಯವಾಡಾ ಮೆಟ್ರೋ ಯೋಜನೆ, ಕಡಪ ಸ್ಟೀಲ್ ಪ್ಲಾಂಟ್ ಹಾಗೂ ದುಗರಾಜಪಟ್ಟಣಂ ಬಂದರಿಗೂ ಬಜೆಟ್ನಲ್ಲಿ ಹಣ ಮೀಸಲಿರಿಸಲಿಲ್ಲ ಎಂದರು.
ಮಹತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ನಿಧಿಯ ಮೂಲಕ ಹಳ್ಳಿಗಳಲ್ಲಿ ಅಂಗನವಾಡಿ ಹಾಗೂ ಪಂಚಾಯಿತಿ ಕಟ್ಟಡಗಳ ಅಭಿವೃದ್ಧಿ ಮಾಡಲಾಗುತ್ತಿತ್ತು. ಆದರೆ ಆ ಬಾರಿಯ ಬಜೆಟ್ನಲ್ಲಿ ಈ ನಿಧಿಗೆ ಕಡಿಮೆ ಹಂಚಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶೂನ್ಯ ಬಜೆಟ್ ನೈಸರ್ಗಿಕ ಕೃಷಿಯ ಕುರಿತು ಪ್ರಸ್ತಾಪಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ನಾಯ್ಡು ಶ್ಲಾಘಿಸಿದರು. ಶೂನ್ಯ ಬಜೆಟ್ ನೈಸರ್ಗಿಕ ಕೃಷಿಗೆ ಆದ್ಯತೆ ನೀಡುವುದು ಸ್ವಾಗತಾರ್ಹ. ಕಳೆದ ಐದು ವರ್ಷದಲ್ಲಿ ನಮ್ಮ ರಾಜ್ಯದಲ್ಲೂ ಇದಕ್ಕೆ ಮಹತ್ವ ನೀಡಲಾಗಿತ್ತು ಎಂದು ಹೇಳಿದರು.