ಮುಂಬೈ: ಟೀಂ ಇಂಡಿಯಾ ತಂಡದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ವೇಳೆ, ಅನೇಕ ವಿಷಯಗಳ ಬಗ್ಗೆ ಮಾತನಾಡಿರುವ ಬೆಂಗಾಲ್ ಟೈಗರ್ ಧೋನಿ ಕುರಿತು ಸಹ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಟಿ-20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ ಟ್ರೋಪಿ ಗೆಲ್ಲುವ ಮೂಲಕ ಭಾರತೀಯ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ದಾಖಲು ಮಾಡಿರುವ ಧೋನಿ ಸದ್ಯ ಇಂಗ್ಲೆಂಡ್ನಲ್ಲಿ ಮುಕ್ತಾಯಗೊಂಡ ವಿಶ್ವಕಪ್ ನಂತರ ಯಾವುದೇ ಕ್ರಿಕೆಟ್ನಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಅವರು ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬರುತ್ತಿದ್ದವು. ಇದೇ ವಿಷಯವಾಗಿ ತಾವು ಮಾತನಾಡುವುದಾಗಿ ಸಹ ಗಂಗೂಲಿ ಹೇಳಿದ್ರು.
ಇದೀಗ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸೌರವ್ ಗಂಗೂಲಿ ಸುದ್ದಿಗೋಷ್ಠಿಯಲ್ಲಿ ಎಂಎಸ್ ಧೋನಿ ಕುರಿತು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಎಂಎಸ್ ಧೊನಿ ಅವರ ಸಾಧನೆ ಇಡೀ ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದೆ. ಧೋನಿ ಏನು ಮಾಡಿದ್ದಾರೆ ಎಂದು ಗಮನಿಸಿದಾಗ, ವಾವ್ಹ್ ಚಾಂಪಿಯನ್ ಎಂಬ ಉತ್ತರ ಬರುತ್ತದೆ. ಅವರ ಸಾಧನೆಯನ್ನ ನಾನು ಗೌರವಿಸುತ್ತೇನೆ ಎಂದು ಹೇಳಿರುವ ಗಂಗೂಲಿ ಚಾಂಪಿಯನ್ ಆಟ ಅಷ್ಟೊಂದು ಸುಲಭವಾಗಿ, ವೇಗವಾಗಿ ಮುಗಿಯುವುದಿಲ್ಲ ಎಂದಿದ್ದಾರೆ.
ಇನ್ನು ಸೌರವ್ ಗಂಗೂಲಿ ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ದ ವೇಳೆ ಎಂಎಸ್ ಧೋನಿ ಟೀಂ ಇಂಡಿಯಾ ತಂಡಕ್ಕೆ ಎಂಟ್ರಿ ಕೊಟ್ಟಿದ್ದರು. ಅದಾದ ಬಳಿಕ ಭಾರತೀಯ ಕ್ರಿಕೆಟ್ನಲ್ಲಿ ಧೋನಿ ಹೊಸ ಅಲೆ ಎಬ್ಬಿಸಿದ್ದರು.