ಕೊರ್ಬಾ(ಛತ್ತೀಸ್‌ಗಢ): ಮೂವರು ಆರೋಪಿಗಳು ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿ ಕೊನೆಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಛತ್ತೀಸ್‌ಗಡದ ಕೊರ್ಬಾ ಜಿಲ್ಲೆಯ ಬ್ಯಾಂಗೋ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನಡೆದಿದೆ.
ಸಂತ್ರಸ್ತೆಯ ಹೇಳಿಕೆ ಆಧಾರದ ಮೇಲೆ ಪೊಲೀಸರು ಶರದ್ ಮಾಸಿಹ್ (25), ಪ್ರೀತಮ್ ಪೈಕ್ರಾ (22) ಮತ್ತು ಸರೋಜ್ ಗಾಡ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 354 (ಕಿರುಕುಳ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮೇ 6 ರ ರಾತ್ರಿ ಘಟನೆ ನಡೆದಿದ್ದು, ಸಂತ್ರಸ್ತೆಯ ಗಂಡನಿಲ್ಲದ ವೇಳೆ ಮನೆಗೆ ನುಗ್ಗಿ ಕಿರುಕುಳ ನೀಡಿದ್ದಾರೆ. ಅವಳು ಪ್ರತಿರೋಧ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದಾಗ, ಮೂವರು ಅವಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಕಿಯ ಕೆನ್ನಾಲಗೆಯಲ್ಲಿ ಸಿಲುಕಿದ್ದ ಹೆಂಡತಿಯನ್ನು ಕಂಡ ಆಕೆಯ ಪತಿ ಬೆಂಕಿ ನಂದಿಸಿ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಶೇ. 60 ರಷ್ಟು ಬೆಂದುಹೋಗಿದ್ದ ಆಕೆಯನ್ನು ಸದ್ಯ ಹೆಚ್ಚಿನ ಚಿಕಿತ್ಸೆಗೆ ನೆರೆಯ ಬಿಲಾಸ್ಪುರ ಜಿಲ್ಲೆಯ ಛತ್ತೀಸ್ಗಡ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಸಿಐಎಂಎಸ್) ಶುಕ್ರವಾರ ಸ್ಥಳಾಂತರಿಸಲಾಗಿದೆ ಎಂದು ಪಟೇಲ್ ತಿಳಿಸಿದ್ದಾರೆ.