ದಾಂತೇವಾಡ: ಛತ್ತೀಸ್ಗಢದ ನಕ್ಸಲ್ಪೀಡಿತ ದಾಂತೇವಾಡ ಜಿಲ್ಲೆಯಲ್ಲಿ ಐಇಡಿ ಸ್ಫೋಟಗೊಳಿಸಿ ಡುಮಾಮ್ ನದಿಯ ಸೇತುವೆಯನ್ನು ನಕ್ಸಲರು ಹಾನಿಗೊಳಿಸಿದ್ದಾರೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಂತೇವಾಡದಲ್ಲಿರುವ ಕುಕೊಂಡ ಮತ್ತು ಕಟೆಕಲ್ಯಾನ್ ಅಭಿವೃದ್ಧಿ ಬ್ಲಾಕ್ ಕೇಂದ್ರ ಕಚೇರಿಗೆ ಇದು ಸಂಪರ್ಕ ಸೇತುವೆಯಗಿತ್ತು. ಗ್ರಾಮಸ್ಥರ ಪ್ರಕಾರ, ಮಾವೋವಾದಿಗಳ ಗುಂಪು ನಿನ್ನೆ ಸಂಜೆ ತುಮಕ್ಪಾಲ್ ಮತ್ತು ಟೆಟಮ್ ಗ್ರಾಮಗಳ ನಡುವಿನ ಸೇತುವೆಯನ್ನು ಸ್ಫೋಟಿಸಿದೆ ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ಮಾಹಿತಿ ನೀಡಿದ್ದಾರೆ.
ಈ ಮೊದಲು ನಕ್ಸಲರು ಈ ಮಾರ್ಗದಲ್ಲಿ ಹಲವಾರು ಸ್ಥಳಗಳಲ್ಲಿ ರಸ್ತೆಗಳನ್ನು ಹಾನಿಗೊಳಿಸಿದ್ದರು. ಆದರೆ, ಈಗ ಟೆಟಮ್‌ನಲ್ಲಿ ಪೊಲೀಸ್ ಕ್ಯಾಂಪ್ ಸ್ಥಾಪಿಸಬಹುದೆಂಬ ಭಯದಿಂದ ಅವರು ಸೇತುವೆಯನ್ನು ನಾಶಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ನಕ್ಸಲರಿಗಾಗಿ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪಲ್ಲವ ತಿಳಿಸಿದ್ದಾರೆ.