ನವದೆಹಲಿ : ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್ ಸಮುದಾಯ ಹರಡುವಿಕೆ ಇಲ್ಲ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ ಎಂದು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಕೋವಿಡ್-19 ಪರಿಸ್ಥಿತಿ ಕುರಿತು ನಡೆದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ರಾಜ್ಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಭಾಗವಹಿಸಿದ್ದರು. ದೆಹಲಿಯಲ್ಲಿ ಕೊರೊನಾ ಸಮುದಾಯ ಹರಡುವಿಕೆ ಇದೆಯೇ ಎಂಬ ವಿಷಯದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕೇಂದ್ರ ಸರ್ಕಾರದ ಅಧಿಕಾರಿಗಳು, ದೆಹಲಿಯಲ್ಲಿ ಸೋಂಕಿನ ಸಮುದಾಯ ಹರಡಿಕೆ ಆಗಿಲ್ಲ. ಹೀಗಾಗಿ ಈ ವಿಚಾರದ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದು ಸಭೆಯ ಬಳಿಕ ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ತಿಳಿಸಿದ್ದಾರೆ.
ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಕುರಿತು ಸಭೆಯಲ್ಲಿ ಚರ್ಚೆಗಳು ನಡೆದವು. ದೆಹಲಿಯಲ್ಲಿ 12-13 ದಿನಗಳಲ್ಲಿ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ಸದ್ಯದ ಮಾಹಿತಿ ಪ್ರಕಾರ, ಜೂನ್ 30 ರವರೆಗೆ 15,000 ಹಾಸಿಗೆಗಳ ಆಸ್ಪತ್ರೆ ದೆಹಲಿಗೆ ಅಗತ್ಯವಿದೆ. ಜುಲೈ 15 ರವರೆಗೆ 33,000 ಹಾಸಿಗೆಗಳು ಬೇಕಾಗುತ್ತವೆ. ಕೋವಿಡ್-19 ರೋಗಿಗಳಿಗೆ ಜುಲೈ 31 ರವರೆಗೆ 80,000 ಹಾಸಿಗೆಗಳ ಅಗತ್ಯವಿದೆ ಎಂದು ಅವರು ಹೇಳಿದರು.