ಕೋಲ್ಕತ್ತಾ: ಲಾಕ್‌ಡೌನ್ ಕುರಿತು ಕೇಂದ್ರ ಸರ್ಕಾರ ಗೊಂದಲದ ಹೇಳಿಕೆಗಳನ್ನು ನೀಡುತ್ತಿದೆ. ಅಲ್ಲದೇ ಅಂಗಡಿಗಳನ್ನು ಪುನಃ ತೆರೆಯುವ ಕುರಿತು ಇತ್ತೀಚೆಗೆ ಕೇಂದ್ರದ ಗೃಹ ಸಚಿವಾಲಯ ನೀಡಿರುವ ಆದೇಶದ ಬಗ್ಗೆ ಹೆಚ್ಚಿನ ಸ್ಪಷ್ಟತೆಬೇಕೆಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.
ರೊಟೇಷನ್ ವಿಧಾನದಿಂದಾಗಿ ಪ್ರಧಾನಿ ಮೋದಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಲು ಕೆಲವು ರಾಜ್ಯದ ಮುಖ್ಯಮಂತ್ರಿಗಳಿಗೆ ಅವಕಾಶ ಸಿಗುತ್ತಿಲ್ಲ. ಒಂದು ವೇಳೆ ನನಗೆ ಮಾತನಾಡಲು ಅವಕಾಶ ಸಿಕ್ರೆ, ಕೇಂದ್ರ ತಂಡವನ್ನು ಪ.ಬಂಗಾಳಕ್ಕೆ ಕಳುಹಿಸುತ್ತಿರುವುದರ ಜೊತೆಗೆ ನಾನು ಪ್ರಧಾನಿ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.
ಲಾಕ್‌ಡೌನ್ ಕುರಿತು ಕೇಂದ್ರ ಗೊಂದಲದ ಹೇಳಿಕೆಗಳನ್ನು ನೀಡುತ್ತಿದೆ. ಯಾವುದೇ ಸ್ಪಷ್ಟತೆ ಇಲ್ಲ. ನಾವು ಲಾಕ್‌ಡೌನ್ ಪರವಾಗಿದ್ದೇವೆ. ಆದರೆ ಕೇಂದ್ರ ಸರ್ಕಾರ ಒಂದು ಕಡೆ ಲಾಕ್‌ಡೌನ್ ಜಾರಿಗೊಳಿಸುವಿಕೆಗೆ ಒತ್ತು ನೀಡುತ್ತದೆ. ಮತ್ತೊಂದೆಡೆ ಅದು ಅಂಗಡಿಗಳನ್ನು ತೆರೆಯುವ ಆದೇಶವನ್ನು ನೀಡುತ್ತದೆ.
ನೀವು ಅಂಗಡಿಗಳನ್ನು ತೆರೆದರೆ, ಲಾಕ್ಡೌನ್ನನ್ನು ಹೇಗೆ ಜಾರಿಗೊಳಿಸುತ್ತೀರಿ? ಕೇಂದ್ರವು ಸ್ಪಷ್ಟೀಕರಣದೊಂದಿಗೆ ಹೇಳಿಕೆಗಳನ್ನು ನೀಡುತ್ತದೆ ಎಂದು ನಾನು ಆಶಿಸುತ್ತೇನೆಂದು ಎಂದು ಬ್ಯಾನರ್ಜಿ ಹೇಳಿದ್ದಾರೆ.