ಲಂಡನ್ (ಯುಕೆ): "ಮೆಂಬ್ರೇನ್ ಆನ್ ಅ ಚಿಪ್" ಎಂಬ ನೂತನ ಕೃತಕ ಮಾನವ ಜೀವಕೋಶದ ತದ್ರೂಪಿ ಸಾಧನವೊಂದನ್ನು ಸಂಶೋಧಿಸಲಾಗಿದೆ. ಔಷಧಿ ಹಾಗೂ ದೇಹ ಪ್ರವೇಶಿಸುವ ರೋಗಾಣುಗಳೊಂದಿಗೆ ಮಾನವ ಜೀವಕೋಶಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದರ ಮೇಲೆ ಈ ಮೆಂಬ್ರೇನ್ ಚಿಪ್ ಮೂಲಕ ನಿರಂತರ ನಿಗಾ ವಹಿಸಬಹುದಾಗಿದೆ. ಈ ಆಧುನಿಕ ತಂತ್ರಜ್ಞಾನವು ಕೋವಿಡ್-19 ಚಿಕಿತ್ಸೆಗಾಗಿ ಸಂಶೋಧಿಸಲಾಗುತ್ತಿರುವ ಔಷಧಿಯ ಪರೀಕ್ಷೆಗೆ ಸಹಾಯಕವಾಗಲಿದೆ ಎಂದು ಹೇಳಲಾಗಿದೆ.
ಈ ಕೃತಕ ಮಾನವ ಜೀವಕೋಶ ಸಾಧನವು ಬ್ಯಾಕ್ಟೀರಿಯಾ, ಮಾನವ, ಸಸ್ಯ ಹೀಗೆ ಯಾವುದೇ ಜೀವಕೋಶದ ತದ್ರೂಪಿಯನ್ನು ತಯಾರಿಸಬಲ್ಲದು ಎಂದು ಕೇಂಬ್ರಿಜ್ ವಿವಿ, ಕಾರ್ನೆಲ್ ವಿವಿ ಹಾಗೂ ಸ್ಟಾನ್ಫರ್ಡ್ ವಿವಿಯ ಸಂಶೋಧಕರು ಹೇಳಿದ್ದಾರೆ.
ಈ ಸಾಧನಗಳನ್ನು ಚಿಪ್ ಮೇಲೆ ಅಭಿವೃದ್ಧಿಪಡಿಸಲಾಗಿದ್ದು, ಜೀವಕೋಶದ ಮೆಂಬ್ರೇನ್ನ ಇರುವಿಕೆ ಹಾಗೂ ಅದರ ಕಾರ್ಯಕ್ಷಮತೆಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂದು ಸಂಶೋಧನಾ ವರದಿಗಳು ತಿಳಿಸಿವೆ.
ಮಾನವ ಜೀವಕೋಶಗಳ ಅಯಾನ್ ಚಾನೆಲ್ಗಳ ಮೇಲೆ ಮೆಂಬ್ರೇನ್ ಆನ್ ಚಿಪ್ ಮೂಲಕ ನಿಗಾ ವಹಿಸಲು ಸಂಶೋಧಕರು ಯಶಸ್ವಿಯಾಗಿದ್ದಾರೆ. ನೋವು ನಿವಾರಣೆಯಿಂದ ಹಿಡಿದು ವೈರಸ್ ಸೋಂಕಿನವರೆಗೆ ಎಲ್ಲವನ್ನೂ ನಿಯಂತ್ರಿಸುವಲ್ಲಿ ಹಾಗೂ ಜೈವಿಕ ಸಂದೇಶ ಕಳುಹಿಸುವಲ್ಲಿ ಸೆಲ್ ಮೆಂಬ್ರೇನ್ಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವು ಜೀವಕೋಶ ಹಾಗೂ ಹೊರಗಿನ ಜಗತ್ತಿನ ಮಧ್ಯೆ ಗೇಟ್ ಕೀಪರ್ನಂತೆ ಕೆಲಸ ಮಾಡುತ್ತವೆ.
ಸೆಲ್ ಮೆಂಬ್ರೇನಿನ ವಿನ್ಯಾಸ, ಹರಿಯುವಿಕೆ ಹಾಗೂ ಅಯಾನ್ ಚಲನೆಗಳ ಮೇಲೆ ಅದರ ನಿಯಂತ್ರಣ ಇವೆಲ್ಲವುಗಳನ್ನು ಸುರಕ್ಷಿತವಾಗಿ ಕಾಪಾಡುವ ಸೆನ್ಸರ್ ಒಂದನ್ನು ತಯಾರಿಸಲು ವಿಜ್ಞಾನಿಗಳು ಮುಂದಾಗಿದ್ದಾರೆ. ಆದರೆ ಜೀವಕೋಶವನ್ನು ಸದಾ ಜೀವಂತವಾಗಿಡಬೇಕೆಂಬ, ಬಹಳ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ ಇದಕ್ಕೆ ಅಗತ್ಯವಾಗಿಲ್ಲದಿರುವುದು ಗಮನಾರ್ಹ.
ಸೆಲ್ ಮೆಂಬ್ರೇನ್ ಸಾಧನದಲ್ಲಿ ಎಲೆಕ್ಟ್ರಾನಿಕ್ ಚಿಪ್ ಒಂದನ್ನು ಬಳಸಲಾಗಿದ್ದು, ಜೀವಕೋಶದಿಂದ ತೆಗೆಯಲಾದ ಮೆಂಬ್ರೇನ್ ಮೇಲ್ಮೈ ಮೇಲೆ ಏನೇ ಬದಲಾವಣೆಗಳಾದರೂ ಈ ಚಿಪ್ ಅದನ್ನೆಲ್ಲವನ್ನು ದಾಖಲಿಸುತ್ತದೆ. ಜೀವಕೋಶವೊಂದು ಹೊರಗಿನ ಜಗತ್ತಿನೊಂದಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಂಡುಹಿಡಿಯುವುದು ಇದರಿಂದ ವಿಜ್ಞಾನಿಗಳಿಗೆ ಸುಲಭವಾಗಲಿದೆ.