ಪೂರ್ವ ಗೋದಾವರಿ (ಆಂಧ್ರ ಪ್ರದೇಶ) : ಜಿಲ್ಲೆಯ ಗೋಕವರಂ ಮಂಡಲದ ತಂತಿಕೊಂಡ ಕಲ್ಯಾಣ ವೆಂಕಟೇಶ್ವರ ದೇವಸ್ಥಾನ (ತಟಿಕೊಂಡ ದೇವಸ್ಥಾನ) ದ ಬಳಿ ಮದುವೆ ವಾಹನವೊಂದು ಗುಡ್ಡದಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ.
ಕುಟುಂಬವೊಂದು ದೇವಸ್ಥಾನದಲ್ಲಿ ಮದುವೆ ಮುಗಿಸಿ ಮನೆಗೆ ಹಿಂದಿರುಗಲು ಅಣಿಯಾಗುತ್ತಿತ್ತು. ಕೆಲ ಮಂದಿ ವಾಹನ ಹತ್ತಿ ಕುಳಿತರೆ, ಇನ್ನು ಕೆಲವರು ವಸ್ತುಗಳನ್ನು ತುಂಬುತ್ತಿದ್ದರು. ಈ ವೇಳೆ ಏಕಾಏಕಿ ಮುಂದಕ್ಕೆ ಚಲಿಸಿದ ವಾಹನ, ಗುಡ್ಡದಿಂದ 15 ಅಡಿ ಆಳಕ್ಕೆ ಬಿದ್ದಿದೆ.
ವಾಹನ ಚಲಿಸುತ್ತಿದ್ದಂತೆ ಮೂವರು ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನುಳಿದ ಏಳು ಮಂದಿ ಮೃತಪಟ್ಟಿದ್ದಾರೆ. ಘಟನೆ ಕುರಿತಂತೆ ಮಾಹಿತಿ ನೀಡಿರುವ ಸಾರಿಗೆ ಅಧಿಕಾರಿಗಳು, ಚಾಲಕನ ಅಜಾಗರೂಕತೆಯೇ ದುರ್ಘಟನೆಗೆ ಕಾರಣ. ಚಾಲಕ ವಾಹನವನ್ನು ನ್ಯೂಟ್ರಲ್ನಲ್ಲಿ ಇಟ್ಟು ಹ್ಯಾಂಡ್ ಬ್ರೇಕ್ ಹಾಕಿದ್ದ.
ಇದರಿಂದ ವಾಹನ ಚಲಿಸಿ, 15 ಅಡಿ ಆಳಕ್ಕೆ ಬಿದ್ದಿದೆ. ಘಟನೆಯಲ್ಲಿ ಏಳು ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಮದುಮಗನ ಅಕ್ಕ ಮರುದಿನ ಬೆಳಗ್ಗೆ ಮೃತಪಟ್ಟಿದ್ದಾರೆ. ದೇವಸ್ಥಾನದ ಬಳಿ ಗುಡ್ಡದ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿತ್ತು ಎಂದು ತಿಳಿಸಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.