ನವದೆಹಲಿ: ಕೊರೊನಾ ಲಾಕ್ಡೌನ್ನಿಂದಾಗಿ ಮುಂದೂಡಿಕೆಯಾಗಿದ್ದ 10 ಹಾಗೂ 12ನೇ ತರಗತಿಯ ಬಾಕಿ ಇರುವ ಬೋರ್ಡ್ ಪರೀಕ್ಷೆಗಳನ್ನು ಜುಲೈ 1ರಿಂದ 15ರವರೆಗೆ ನಡೆಸಲಾಗುವುದು ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ತಿಳಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ ಮುಖ್ಯ ಪರೀಕ್ಷೆಗಳು ಜುಲೈ 18ರಿಂದ 23 ಹಾಗೂ ಜುಲೈ 26ರಂದು ನೀಟ್ ಪರೀಕ್ಷೆ ನಡೆಯಲಿದ್ದು, ಇದಕ್ಕೂ ಮೊದಲೇ ಬೋರ್ಡ್ ಪರೀಕ್ಷೆಗಳನ್ನು ಮುಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ 3,000 ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಇದೀಗ 15,000 ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಾಹಿತಿ ನೀಡಿದ್ದಾರೆ.
12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ದೇಶಾದ್ಯಂತ ನಡೆಯಲಿದೆ. ಆದರೆ 10ನೇ ತರಗತಿಯ ಪರೀಕ್ಷೆಗಳು ಈಶಾನ್ಯ ದೆಹಲಿಯಲ್ಲಿ ಮಾತ್ರ ಬಾಕಿ ಉಳಿದಿವೆ. ಪೌರತ್ವ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಳಿಂದಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪರೀಕ್ಷೆಗಳು ಸ್ಥಗಿತಗೊಂಡಿದ್ದವು.
ಕಂಟೇನ್ಮೆಂಟ್ ಝೋನ್ಗಳಲ್ಲಿ ಪರೀಕ್ಷೆಗಳನ್ನು ನಡೆಸುವಂತಿಲ್ಲ ಹಾಗೂ ಆಯಾ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ತಲುಪಿಸುವ ಸಾರಿಗೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರಗಳು ಮಾಡಬೇಕು ಎಂದು ಈಗಾಗಲೇ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.