ಹೈದರಾಬಾದ್: ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಹೈದರಾಬಾದ್ ಸಿಬಿಐ ಕೋರ್ಟ್ನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸುವಂತೆ ಸಿಬಿಐ ಪರ ವಕೀಲರು ಹೈದರಾಬಾದ್ನ ಸಿಬಿಐ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಓಬಳಾಪುರಂ ಗಣಿಗಾರಿಕಾ ಪ್ರದೇಶವು ಆಂಧ್ರಪ್ರದೇಶ ಹಾಗೂ ಕರ್ನಾಟಕದ ಗಡಿಭಾಗದಲ್ಲಿದೆ. 2011ರಲ್ಲಿ ಓಬಳಾಪುರಂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಅಖಂಡ ಆಂಧ್ರಪ್ರದೇಶ ರಾಜ್ಯವಿತ್ತು. ನಂತರದ ದಿನಗಳಲ್ಲಿ ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯ ವಿಂಗಡಣೆಯಾಗಿದೆ. ಪ್ರಕರಣ ದಾಖಲಾದ ನಂತರ 2011ರ ಸೆಪ್ಟಂಬರ್ 5ರಂದು ಸಿಬಿಐ, ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿತ್ತು. ಆಗಿನಿಂದಲೂ ಈ ಪ್ರಕರಣದ ವಿಚಾರಣೆ ಹೈದರಾಬಾದ್ನ ವಿಶೇಷ ಸಿಬಿಐ ಕೋರ್ಟ್ನಲ್ಲಿ ನಡೆಯುತ್ತಿದೆ.
ಸದ್ಯ ಸಿಬಿಐ ಪರ ವಕೀಲರು ಪ್ರಕರಣವನ್ನು ಆಂಧ್ರಪ್ರದೇಶಕ್ಕೆ ವರ್ಗಾವಣೆ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಆರೋಪಿಗಳ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.