ಕೋಲ್ಕತ್ತಾ: ಈಸ್ಟರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ (ಇಸಿಎಲ್)ನಿಂದ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಮತ್ತು ಕಲ್ಲಿದ್ದಲು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪಶ್ಚಿಮ ಬಂಗಾಳದ ಅಸನ್ಸೋಲ್, ದುರ್ಗಾಪುರ ಮತ್ತು ರಾಣಿಗಂಜ್ ವ್ಯಾಪ್ತಿಯ 10 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಮೂಲಗಳ ಪ್ರಕಾರ, ಸುಮಾರು 75 ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಕೇಸ್ ಸಂಬಂಧ ಅಕ್ರಮ ಕಲ್ಲಿದ್ದಲು ವಹಿವಾಟು ಜಾಲದ ಕಿಂಗ್ಪಿನ್ ಅನೂಪ್ ಮಾಜಿ ಅಲಿಯಾಸ್ ಲಾಲಾ ಮತ್ತು ಅವರ ಸಹಚರ ಬಿನೊಯ್ ಮಿಶ್ರಾ ಅವರ ಸಂಬಂಧಿಕರ ಮನೆಗಳಲ್ಲಿ ಸಿಬಿಐ ಶೋಧ ನಡೆಸಿದೆ.
ಕಲ್ಲಿದ್ದಲು ಹಗರಣ ಸಂಬಂಧ ಸೋಮವಾರದಂದು ಸಹ ಜಾರಿ ನಿರ್ದೇಶನಾಲಯ (ಇಡಿ) ಪಶ್ಚಿಮ ಬಂಗಾಳ ರಾಜ್ಯಾದ್ಯಂತ 12 ಸ್ಥಳಗಳಲ್ಲಿ ದಾಳಿ ನಡೆಸಿತ್ತು, ಉದ್ಯಮಿ ಗಣೇಶ್ ಬಗಾಡಿಯಾ ಮತ್ತು ಸಂಜಯ್ ಸಿಂಗ್ ಅವರ ನಿವಾಸ ಮತ್ತು ಕಚೇರಿಗಳಲ್ಲಿ ಶೋಧ ನಡೆದಿತ್ತು. ಕಲ್ಲಿದ್ದಲಿನ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಸೋಮವಾರ ಬೆಳಗ್ಗೆಯಿಂದ ಕೋಲ್ಕತ್ತಾದ ಲೇಕ್ ಟೌನ್ ಪ್ರದೇಶ, ಗರಿಯಾ, ಕೊನ್ನಗರದ ಹೂಗ್ಲಿ ಜಿಲ್ಲೆಯ ಕಾನೈಪುರ ಮತ್ತು ಉತ್ತರ 24 - ಪರಗಣಗಳಲ್ಲಿ ದಾಳಿ ನಡೆಸಲಾಗಿದೆ. ಉದ್ಯಮಿ ಬಾಗಾಡಿಯಾ ಮತ್ತು ಸಿಂಗ್ ಅವರು ಮಿಜ್ರಾ ಅವರೊಂದಿಗೆ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಕಚೇರಿಗಳಲ್ಲಿ ಶೋಧಗಳು ಮಾಜಿ ಜೊತೆ ಕನೆಕ್ಷನ್ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಕಲ್ಲಿದ್ದಲು ಕಳ್ಳಸಾಗಣೆ ದಂಧೆಗೆ ಸಂಬಂಧಿಸಿದಂತೆ ಕಳೆದ ವರ್ಷ ನವೆಂಬರ್ 28 ರಂದು ಸಿಬಿಐ ಭ್ರಷ್ಟಾಚಾರ ನಿಗ್ರಹ ಶಾಖೆ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ 45 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಅಧಿಕಾರಿಗಳು ಬುರ್ದ್ವಾನ್ ಜಿಲ್ಲೆಯ ಅಸನ್ಸೋಲ್, ದುರ್ಗಾಪುರ, ಮತ್ತು ರಾಣಿಗಂಜ್ನಲ್ಲಿರುವ ಕಚೇರಿಗಳು ಮತ್ತು ಮನೆಗಳ ಮೇಲೆ ಹಾಗೂ ಕೋಲ್ಕತ್ತಾದ ಪಕ್ಕದ ದಕ್ಷಿಣ 24- ಪರಗಣ ಜಿಲ್ಲೆಯ ಬಿಷ್ಣುಪುರದಲ್ಲಿ ದಾಳಿ ನಡೆಸಿದ್ದರು.
ಈ ಮಧ್ಯೆ ಜಾನುವಾರು ಕಳ್ಳಸಾಗಾಣಿಕೆ ಜಾಲವೊಂದರ ಜೊತೆ ಮಾಜಿ ಶಾಸಕ ಮೊಹ್ಮದ್ ಸೊಹ್ರಬ್ ನಂಟು ಹೊಂದಿದ್ದಾರೆ ಎಂಬ ಆರೋಪದ ಮೇಲೆ ಐಟಿ ಅಧಿಕಾರಿಗಳು ಅವರ ನಿವಾಸ ಹಾಗೂ ಮೊಹ್ಮದ್ ಒಡೆತನದ ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ:ಎಂಡಿಎಂಎ ಡ್ರಗ್ಸ್ ಪ್ರಕರಣ: ಹೈದರಾಬಾದ್ನ ಫಾರ್ಮಾ ಕಾರ್ಖಾನೆ ಮೇಲೆ ಅಪರಾಧ ವಿಭಾಗ ದಾಳಿ