ನವದೆಹಲಿ/ ಅಮರಾವತಿ: ಸುಪ್ರೀಂಕೋರ್ಟ್ ಹಾಗೂ ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳ ಕುರಿತು ಮಾನಹಾನಿ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ 16 ಮಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಸಿಬಿಐ ತನಿಖೆ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಹೈಕೋರ್ಟ್ ಆದೇಶದ ಮೇರೆಗೆ ಕೇಂದ್ರೀಯ ತನಿಖಾ ದಳ ಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಬಿ.ರಾಜಶೇಖರ್ ಅವರ ದೂರಿನ ಮೇರೆಗೆ ರಾಜ್ಯ ಸಿಐಡಿ ದಾಖಲಿಸಿರುವ 12 ಪ್ರಕರಣಗಳಲ್ಲಿ ತನಿಖೆಯನ್ನು ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ಕೆಲವು ಪ್ರಮುಖ ಹುದ್ದೆಯಲ್ಲಿರುವವರೇ, ನ್ಯಾಯಮೂರ್ತಿಗಳ ಕುರಿತು ನಿಂದನಾತ್ಮಕವಾಗಿ ಬರಹ, ಭಾಷಣ, ಜಾತಿ ಹಾಗೂ ಅವರು ಭ್ರಷ್ಟರು ಎಂಬಂತೆ ಬಿಂಬಿಸುವ ಪೋಸ್ಟ್ಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸುಪ್ರೀಂ, ಹೈಕೋರ್ಟ್ನ ಕೆಲವು ನ್ಯಾಯಮರ್ತತಿಗಳಿಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಅಲ್ಲದೆ, ಅವರ ತೀರ್ಪುಗಳ ಬಗ್ಗೆಯೂ ಉಲ್ಲೇಖಿಸಿ ನಿಂದಿಸಲಾಗಿದೆ ಎನ್ನಲಾಗ್ತಿದೆ.
ಕಳೆದ ಅಕ್ಟೋಬರ್ 12ರಂದು ಪ್ರಕರಣ ಸಂಬಂಧ ಸಿಬಿಐಗೆ ತನಿಖೆ ನಡೆಸಿ ಎಂಟು ವಾರದಲ್ಲಿ ಸೀಲ್ಡ್ ಕವರ್ನಲ್ಲಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಅಲ್ಲದೆ ಮುಂದಿನ ವಿಚಾರಣೆಯನ್ನು ಡಿಸೆಂಬರ್14ಕ್ಕೆ ಮುಂದೂಡಿ ಆದೇಶ ಹೊರಡಿಸಿತ್ತು.
ಮಾನಹಾನಿಕಾರಕ ಪೋಸ್ಟ್ಗಳ ಕುರಿತಂತೆ, ಸುಪ್ರೀಂಕೋರ್ಟ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಉದ್ದೇಶಪೂರ್ವಕವಾಗಿಯೇ ಗುರಿಯಾಗಿಸಿ ಮಾಡಲಾಗುತ್ತಿರುವ ಪೋಸ್ಟ್ಗಳ ಹಿಂದೆ ದಕ್ಷಿಣ ಭಾಗದ ರಾಜ್ಯದಲ್ಲಿನ ವ್ಯಕ್ತಿಗಳ ಪಾತ್ರವನ್ನು ತನಿಖೆ ನಡೆಸಿ ವರದಿ ನೀಡುವಂತೆಯೂ ಸೂಚಿಸಲಾಗಿದೆ.
ಘಟನೆ ಸಂಬಂಧ ವಿಶಾಖಪಟ್ಟಣಂನ ಸಿಬಿಐ ಕಚೇರಿಯಲ್ಲಿ ಐಪಿಸಿ ಸೆಕ್ಷನ್ 506 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67 ಸೇರಿದಂತೆ ವಿವಿಧ ವಿಭಾಗಗಳಡಿ ಪ್ರಕರಣ ದಾಖಲಾಗಿದೆ.