ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿ ವಿ ಶ್ರೀನಿವಾಸ್ ಅವರನ್ನು ಭಾರತೀಯ ಯುವ ಕಾಂಗ್ರೆಸ್ನ ಸಾಮಾನ್ಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಲೋಕಸಭಾ ಚುನಾವಣೆಯ ನಂತರ ಕೇಶವ್ ಚಂದ್ ಯಾದವ್ ಅವರು ಈ ಹುದ್ದೆಗೆ ರಾಜೀನಾಮೆ ನೀಡಿದಾಗ ಶ್ರೀನಿವಾಸ್ ಅವರನ್ನು ಜುಲೈ 2019 ರಲ್ಲಿ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ತಕ್ಷಣದಿಂದ ಜಾರಿಗೆ ಬರುವಂತೆ ಐವೈಸಿ ಹಂಗಾಮಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರನ್ನು ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರ ಅಧಿಕೃತ ಮೂಲ ತಿಳಿಸಿದೆ.
ಭದ್ರಾವತಿ ಬಿ ವಿ ಶ್ರೀನಿವಾಸ್ :
2019ರ ಜುಲೈ ತಿಂಗಳಲ್ಲಿ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಅವರ ಕಾರ್ಯನಿರ್ವಹಣೆಯನ್ನು ಮೆಚ್ಚಿರುವ ರಾಷ್ಟ್ರೀಯ ಕಾಂಗ್ರೆಸ್ ಇದೀಗ ಅವರನ್ನು ಪೂರ್ಣಾವಧಿ ಅಧ್ಯಕ್ಷರನ್ನಾಗಿ ನಿಯೋಜಿಸಿ ಆದೇಶ ಹೊರಡಿಸಿದೆ. ಪಕ್ಷ ಸಂಘಟನೆಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ನಿರಂತರವಾಗಿ ಕೈಗೊಂಡ ಪ್ರತಿಭಟನೆ ಹಾಗೂ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಮಿಕರು ಹಾಗೂ ಜನಸಾಮಾನ್ಯರ ನೆರವಿಗೆ ಧಾವಿಸಿದ ಕಾರ್ಯವನ್ನು ಮೆಚ್ಚಿ ರಾಷ್ಟ್ರೀಯ ಕಾಂಗ್ರೆಸ್ ಒಂದು ಅವಕಾಶ ಒದಗಿಸಿಕೊಟ್ಟಿದೆ.
ಅಖಿಲ ಭಾರತ ಯುವ ಕಾಂಗ್ರೆಸ್ ಪ್ರವೇಶ ಮಾಡುವ ಮುನ್ನ ಆರು ವರ್ಷಕ್ಕೂ ಅಧಿಕ ಅವಧಿ ಇವರು ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಶಿವಾಜಿನಗರ ಶಾಸಕರಾಗಿರುವ ರಿಜ್ವಾನ್ ಅರ್ಷದ್ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭ ಶ್ರೀನಿವಾಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಇನ್ನು ರಾಜೀವ್ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೇಳೆ ಕಾರ್ಯದರ್ಶಿ ಆಗಿದ್ದ ಇವರು ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವಧಿಯಲ್ಲಿ ಪ್ರಧಾನ ಕಾರ್ಯದರ್ಶಿ ಹಾಗೂ ಕೇಶವ್ ಚಾಂದ್ ಯಾದವ್ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎದುರಾದ ಸೋಲಿನ ಹಿನ್ನೆಲೆ ಕೇಶವ್ ಚಾಂದ್ ಯಾದವ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಶ್ರೀನಿವಾಸ್ ಹಂಗಾಮಿ ಅಧ್ಯಕ್ಷರಾಗಿ ನೇಮಕ ರಾಗಿದ್ದರು. 1987 ರಲ್ಲಿ ಕರ್ನಾಟಕದವರೇ ಆದ ಗುರುದಾಸ್ ಕಾಮತ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಬಿ ವಿ ಶ್ರೀನಿವಾಸ್ ಆಯ್ಕೆಯಾಗಿದ್ದು, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎರಡನೇ ಕನ್ನಡಿಗರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.