ಶ್ರೀನಗರ: ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿ ಪ್ರದೇಶ ಸಾಂಬಾ ಸೆಕ್ಟರ್ನಲ್ಲಿ ಬಿಎಸ್ಎಫ್ ಯೋಧರು ಸುರಂಗ ಮಾರ್ಗ ಪತ್ತೆ ಹಚ್ಚಿದ್ದು, ಈ ರೀತಿಯ ಮತ್ತಷ್ಟು ಮಾರ್ಗಗಳಿರುವ ಶಂಕೆ ವ್ಯಕ್ತವಾಗಿದೆ.
ಯೋಧರು ಪಹರೆ ನಡೆಸುತ್ತಿದ್ದ ವೇಳೆ ಭೂಮಿಯಿಂದ 20 ಮೀಟರ್ ಆಳದಲ್ಲಿ ಕಂಡುಬಂದ ಈ ಸುರಂಗ, ಗಡಿಯಿಂದ 50 ಮೀಟರ್ ಒಳಗಿದೆ ಎಂದು ತಿಳಿದು ಬಂದಿದೆ. ಇದರ ಬಳಿ ಕೆಲ ಮರಳಿನ ಬ್ಯಾಗುಗಳು ಪತ್ತೆಯಾಗಿವೆ. ಈ ಬ್ಯಾಗುಗಳ ಮೇಲೆ ಪಾಕಿಸ್ತಾನದ ಕರಾಚಿ ಹಾಗೂ ಶಕ್ಕೇರ್ಗಢದ ಹೆಸರುಗಳಿವೆ.
ಕಳೆದ ಕೆಲ ದಿನಗಳ ಹಿಂದೆ ಇದೇ ರೀತಿಯ ಬ್ಯಾಗುಗಳು ಲಭ್ಯವಾಗಿದ್ದವು. ಸುರಂಗ ಪತ್ತೆಯಾಗುತ್ತಿದ್ದಂತೆ ಸೇನೆ ಕಟ್ಟೆಚ್ಚರ ವಹಿಸಿದೆ. ಇವುಗಳನ್ನು ಪತ್ತೆ ಮಾಡಲು ಇದೀಗ ರಾಡಾರ್ ಬಳಕೆ ಮಾಡಲಾಗುತ್ತಿದೆ. ಈ ಹಿಂದೆ ಕೂಡ ಅನೇಕ ಸಲ ಇಂತಹ ಸುರಂಗಗಳು ಬೆಳಕಿಗೆ ಬಂದಿದ್ದು, ಉಗ್ರರು ಒಳನುಸುಳಲು ಯತ್ನಿಸುತ್ತಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.